ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ಸ್ವರೂಪದ ವಾಯುಭಾರ ಕುಸಿತವು ಚಂಡಮಾರುತವಾಗಿ ಮಾರ್ಪಾಡಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಗಳಿವೆ. ಕಳೆದ ಎಂಟು ಹತ್ತು ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, ಒಣ ಹವೆ ಮುಂದುವರೆದಿತ್ತು.
ಆದರೂ ಚಳಿಯ ತೀವ್ರತೆ ಅಷ್ಟಾಗಿ ಕಂಡು ಬರುತ್ತಿಲ್ಲ. ಚಂಡಮಾರುತದ ಪರಿಣಾಮದಿಂದ ನಾಳೆಯಿಂದ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಡಿ.9ರಿಂದ 12ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದ ಪೂರ್ವಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಚದುರಿದಂತೆ ಕೆಲವೆಡೆ ಮಳೆಯಾಗುವ ಸಂಭವವಿದೆ ಹವಾಮಾನ ತಜ್ಞರು ತಿಳಿಸಿದ್ದಾರೆ.
ತಮಿಳುನಾಡಿನ ಉತ್ತರ ಹಾಗೂ ಆಂಧ್ರಪ್ರದೇಶದ ದಕ್ಷಿಣ ಭಾಗದ ಬಂಗಾಳಕೊಲ್ಲಿಯಲ್ಲಿ ತೀವ್ರ ಸ್ವರೂಪದ ವಾಯುಭಾರ ಕುಸಿತ ಉಂಟಾಗಿದೆ. ಇದು ಇಂದು ಸಂಜೆ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರಿಂದ ಆಂಧ್ರಪದ್ರದೇಶ, ಪಾಂಡಿಚೆರಿ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ.
ಆದರೆ, ಇದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದ್ದು, ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.
ಆದರೆ, ಈ ಚಂಡ ಮಾರುತವು ಪ್ರಬಲವಾಗುವ ಲಕ್ಷಣಗಳಿಲ್ಲ. ಒಂದೆರದು ದಿನದಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ಭೂಸ್ಪರ್ಶವಾಗಿ ತನ್ನ ಸಾಮಥ್ರ್ಯ ಕಳೆದುಕೊಂಡು ದುರ್ಬಲವಾಗಲಿದೆ. ಬಳಿಕ ಕರ್ನಾಟಕದ ಮೂಲಕ ಹಾದು ಹೋಗಿ ಅರಬ್ಬೀ ಸಮುದ್ರ ತಲುಪುವ ನಿರೀಕ್ಷೆ ಇದೆ.