ಲಂಡನ್, ಅಕ್ಟೋಬರ್ 3: ಲಂಡನ್ ಪೊಲೀಸರು ಮಂಗಳವಾರ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಅವರನ್ನು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧನವಾದ ಕೆಲ ಸಮಯಕ್ಕೆ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.
ಕಾನೂನಿನ ನಿಯಮಾನುಸಾರ ವಿಜಯ್ ಮಲ್ಯ ಬಂಧನವಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತದಲ್ಲಿ ವಿವಿಧ ಬ್ಯಾಂಕ್ ಗಳು ನೀಡಿದ ಆರು ಸಾವಿರ ಕೋಟಿ ರುಪಾಯಿಯನ್ನು ಬೇರೆ ಉದ್ದೇಶಕ್ಕೆ ಮಲ್ಯ ಬಳಸಿಕೊಂಡಿದ್ದಾರೆ ಎಂಬ ತನಿಖಾ ಸಂಸ್ಥೆಗಳ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ಆರಕ್ಕೂ ಹೆಚ್ಚು ದೇಶಗಳಲ್ಲಿನ ಶೆಲ್ ಕಂಪೆನಿಗಳಲ್ಲಿ ವಿಜಯ್ ಮಲ್ಯ ಹಣ ಹೂಡಿಕೆ ಮಾಡಿದ್ದಾರೆ ಎಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಆರೋಪವಾಗಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ವಿಜಯ್ ಮಲ್ಯ ಭಾರತದಿಂದ ಲಂಡನ್ ಗೆ ಪಲಾಯನ ಮಾಡಿದ್ದರು. ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವಂತೆ ಕೇಂದ್ರ ಸರಕಾರವು ಬ್ರಿಟನ್ ಗೆ ಮನವಿ ಮಾಡಿದ್ದು, ಈ ಸಂಬಂಧ ಬರುವ ಡಿಸೆಂಬರ್ ನಲ್ಲಿ ವಿಚಾರಣೆಯು ಕೋರ್ಟ್ ಮುಂದೆ ಬರಲಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ಸಂಬಂಧಪಟ್ಟ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ. ಮಲ್ಯ ಪಡೆದಿದ್ದ 6,000 ಕೋಟಿ ರು. ಸಾಲ ಹೋಗಿದ್ದೆಲ್ಲಿ? ಇಲ್ಲಿದೆ ಉತ್ತರ! ತನಿಖಾ ಸಂಸ್ಥೆಗಳ ಮಾಹಿತಿ ಪ್ರಕಾರ, ಮಲ್ಯ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾದ ಏಳು ದೇಶಗಳಲ್ಲಿ ವಿಚಾರಣೆಗಾಗಿ ದೂರು ದಾಖಲಿಸಲಾಗಿದೆ.