ಹೊನ್ನಾವರ : ಭಾರತದಂತಹ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಪಕ್ಷದ ಟಕೇಟ್ ಕೇಳಲು ಸರ್ವರೂ ಸ್ವತಂತ್ರರು ಎಂದು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ನುಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ ಸೊಶಿಯಲ್ ಕ್ಲಬ್ ಸಭಾಭವನದಲ್ಲಿ ಪರೇಶ್ ಸಾವಿನ ಮರು ತನಿಖೆಗೆ ಒತ್ತಾಯಿಸುತ್ತಿರುವ ಬಿ.ಜೆ.ಪಿ.ಮುಖಂಡರ ಸೋಗಲಾಡಿತನವನ್ನು ಬಹಿರಂಗ ಪಡಿಸುವ ಕುರಿತಂತೆ ನಡೆದ ಜನ ಜಾಗೃತಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದಂತಹ ಅತೀ ದೊಡ್ಡ ಪಕ್ಷದಲ್ಲಿ, ಮುಂದೆ ನಡೆಯುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳು ಸಾಕಷ್ಟಿರಬಹುದು. ಆದರೆ ಪಕ್ಷದ ಚುನಾವಣಾ ಆಯ್ಕೆ ಸಮಿತಿ, ಯಾರಿಗೇ ಟಿಕೇಟ್ ನೀಡಿದರೂ, ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ, ಪಕ್ಷದ ಗೆಲುವಿಗಾಗಿ ಹೋರಾಡುತ್ತೇವೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಮಾತನಾಡುತ್ತಾ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿ.ಜೆ.ಪಿ.ಸರಕಾರಕ್ಕೆ ಯಾವುದೇ ಜನಪರ ಕಾಳಜಿ ಇಲ್ಲಾ. ಕೇವಲ ಜಾತಿ, ಧರ್ಮದ ನಡುವೆ ವಿಷ ಬೀಜವನ್ನು ಬಿತ್ತಿ ಚುನಾವಣೆ ಗೆಲ್ಲುವುದೊಂದೇ ಅವರ ಕಾರ್ಯವಾಗಿದ್ದು, ಪರೇಶ ಮೇಸ್ತ ಸಾವನ್ನು ಕಳೆದ ಚುನಾವಣೆಯಲ್ಲಿ ಬಿ.ಜೆ.ಪಿ. ಬಳಸಿಕೊಂಡಿದ್ದನ್ನು ಎಳೆಎಳೆಯಾಗಿ ಕಾರ್ಯಕರ್ತರಿಗೆ ವಿವರಿಸಿ ಮುಂದಿನ ದಿನದಲ್ಲಿ ಈ ವಿಷಯವನ್ನು ಪ್ರತಿ ಮತಗಟ್ಟೆಗೆ ತಲುಪಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಮಾತನಾಡಿ ಪರೇಶ್ ಮೇಸ್ತ ಸಾವಿನ ದಿನವನ್ನು ಮತೀಯ ವಾದಿಗಳು ಬಳಸಿಕೊಂಡ ರೀತಿ ಹಾಗೂ ಆನಂತರ ಜಿಲ್ಲೆಯಾದ್ಯಂತ ಬುಗಿಲೆದ್ದ ಹಿಂಸಾಚಾರವನ್ನು ನೆನಪಿಸಿದರು.ಪರೇಶ್ ಮೇಸ್ತ ಸಾವಿನ ನಂತರ ಹೊನ್ನಾವರ ಪಟ್ಟಣ ಮತ್ತು ಹೊನ್ನಾವರ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟಿಸುವುದು ಸವಾಲಿನ ಕಾರ್ಯವಾಗಿತ್ತು. ಆದರೂ ಕೋಮುವಾದಿಗಳನ್ನು ಧೈರ್ಯದಿಂದ ಎದುರಿಸಿ, ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಪಕ್ಷವನ್ನು ಹೊನ್ನಾವರ ಭಾಗದಲ್ಲಿ ಜೀವಂತವಾಗಿರಿಸಿದ ಬಗ್ಗೆ ವಿವರಿಸಿದರು.