ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ದಾಖಲೆಯ ಗೆಲವು ಸಾಧಿಸಿದೆ. 1995 ರಿಂದ ಗುಜರಾತ್‌ನಲ್ಲಿ ಸತತ ಗೆಲುವು ಸಾಧಿಸುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ), ಇಂದು ಸತತ ಏಳನೇ ಅವಧಿಗೆ ಅಧಿಕಾರಕ್ಕೇರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಹಿಂದಿನ ಕಾಂಗ್ರೆಸ್ ದಾಖಲೆಯನ್ನು ಧೂಳಿಪಟ ಮಾಡಿದೆ. 1985ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್‌ನ 149 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿತ್ತು.

RELATED ARTICLES  ಬಿಜೆಪಿಗೆ ಪಂಚ ರಾಜ್ಯಗಳಲ್ಲಿ ಹೀನಾಯ ಸೋಲು: 3 ರಾಜ್ಯಗಳಲ್ಲಿ ಗೆಲುವು ಕಂಡ ಕಾಂಗ್ರೆಸ್ .

ಗುಜರಾತ್​ನಲ್ಲಿ ಬಿಜೆಪಿಗೆ ಪ್ರಬಲ ಪ್ರತಿರೋಧ ಒಡ್ಡಬಹುದು ಎಂದು ನಿರೀಕ್ಷಿಸಿದ್ದ ಆಮ್ ಆದ್ಮಿ ಪಕ್ಷ ಕೇವಲ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿ ಪ್ರತಿಪಕ್ಷ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ತನ್ನ ಶಾಸಕರಿಗೆ ಆಪರೇಷನ್ ಕಮಲದ ಗಾಳ ಹಾಕಬಹುದು ಎಂಬ ಕಾರಣಕ್ಕೆ ಎಲ್ಲ ಶಾಸಕರಿಗೂ ಚಂಡೀಗಢಕ್ಕೆ ತೆರಳುವಂತೆ ಹೈಕಮಾಂಡ್ ಸೂಚನೆ ನೀಡಿದೆ.

RELATED ARTICLES  ಗಂಭೀರ ಸಮಸ್ಯೆ ಇಲ್ಲ, ಆದರೆ ಸೇನಾ ಪಡೆ ಸನ್ನದ್ಧವಾಗಿದೆ: ಡೋಕ್ಲಾಮ್ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕಾರಕ್ಕೆ ಬರಲು ಯಾವುದೇ ಪಕ್ಷಕ್ಕೆ 35 ಸದಸ್ಯ ಬಲದ ಅಗತ್ಯವಿದೆ. ಕಾಂಗ್ರೆಸ್ 40, ಬಿಜೆಪಿ 25 ಸ್ಥಾನಗಳನ್ನು ಪಡೆದರೆ, ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.