ಕುಮಟಾ: ಡಿ.೧೧ ರಂದು ಬೆಳಿಗ್ಗೆ ೧೦ ಘಂಟೆಗೆ ಬಡಗಣಿಯ ಗೋಗ್ರೀನ್ ಮೈದಾನದಲ್ಲಿ ಹವ್ಯಕ ಸಮಾವೇಶ ಹಮ್ಮಿಕೊಂಡಿದ್ದು ಆ ಕುರಿತಾಗಿ ಮಾಹಿತಿ ನೀಡುವ ಉದ್ದೇಶದಿಂದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಹವ್ಯಕ ಸಮಾಜದ ಸಂಘಟನೆಯನ್ನು ಬಲಪಡಿಸುವುದು ಮತ್ತು ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಹವ್ಯಕ ಸೇವಾ ಪ್ರತಿಷ್ಠಾನ ಸ್ಥಾಪನೆಯಾಗಿದೆ. ಇದರ ಕಾರ್ಯ ಎಲ್ಲರಿಗೂ ತಲುಪುವಂತಾಗಬೇಕು ಎಂಬ ಕಾರಣದಿಂದ ಡಿ.೧೧ ರಂದು ಬೆಳಿಗ್ಗೆ ೧೦ ಘಂಟೆಗೆ ಬಡಗಣಿಯ ಗೋಗ್ರೀನ್ ಮೈದಾನದಲ್ಲಿ ಹವ್ಯಕ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಎಂ.ಜಿ.ಭಟ್ಟ ತಿಳಿಸಿದರು. ಅವರು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿ, ಸಮಾಜದಲ್ಲಿ ತೊಂದರೆ ಅನುಭವಿಸುತ್ತಿರುವ ಕುಟುಂಬಸ್ಥರಿಗೆ ಆರ್ಥಿಕ ಧನ ಸಹಾಯ ಮಾಡುವುದು. ಸಮಾಜವನ್ನು ಸಂಘಟಿಸುವುದರ ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಸಹಾಯ ಮಾಡುವ ಕಾರ್ಯವನ್ನು ಹವ್ಯಕ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದೇವೆ. ತಂದೆ ಮತ್ತು ತಾಯಿಯನ್ನು ಕಳೆದುಕೊಂಡು ಇನ್ನೊಬ್ಬರ ಆಶ್ರಯದಲ್ಲಿರುವ ಬಡ ವಿದ್ಯಾರ್ಥಿನಿಯ ಹೃದಯ ಸಂಬಂಧಿ ಖಾಯಿಲೆಗೆ ಶಸ್ತ್ರ ಚಿಕಿತ್ಸೆಗೆ ತಗಲುವ ಹಣವನ್ನು ಇತ್ತೀಚೆಗೆ ಹವ್ಯಕ ಸೇವಾ ಪ್ರತಿಷ್ಠಾನದ ಮೂಲಕ ಸಂಗ್ರಹಿಸಿ, ನೀಡಿದ್ದೇವೆ. ಪ್ರಚಾರ ಪಡೆದುಕೊಳ್ಳದೇ, ಸಮಾಜದ ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ನೀಡಿದ್ದೇವೆ ಮತ್ತು ಮುಂದೆಯೂ ನೀಡಲಿದ್ದೇವೆ ಎಂದರು.

ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಹವ್ಯಕರು ಕೃಷಿ ಮೂಲದಿಂದ ಬಂದವರಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಬಹಳ ಕಷ್ಟದಾಯಕವಾಗಿದೆ. ಅನೇಕ ಸವಾಲುಗಳು ನಮ್ಮಲಿದ್ದು, ಆರ್ಥಿಕವಾಗಿ ಅನೇಕ ಕುಟುಂಬಗಳು ಹಿಂದುಳಿದಿವೆ. ಅವರಿಗೆ ಸಹಾಯ ಮಾಡಿ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಹವ್ಯಕ ಸಮಾವೇಶ ಏರ್ಪಡಿಲಾಗಿದೆ. ನಮ್ಮ ಸಮಾಜದ ಜತೆ ಉಳಿದ ಸಮಾಜಕ್ಕೂ ಸಹಾಯ ಮಾಡುವ ಉದ್ದೇಶ ನಮ್ಮಲ್ಲಿದೆ. ಹೊಸದೊಂದು ವಿಚಾರದೊಂದಿಗೆ ಡಿ.೧೧ ರಂದು ಹವ್ಯಕ ಸಮಾವೇಶ ನಡೆಯಲಿದೆ. ನಮ್ಮ ಸಮಾಜದ ಜತೆ ಇತರ ಸಮಾಜ ಬಾಂಧವರು ಪಾಲ್ಗೊಳ್ಳಬಹುದು ಎಂದರು.

RELATED ARTICLES  ಚಲಿಸುತ್ತಿದ್ದ ವಾಹನದಲ್ಲಿ ಬೆಂಕಿ : ತಪ್ಪಿದ ಭಾರೀ ಅನಾಹುತ.

ಗೋಗ್ರೀನ್ ಮೈದಾನದ ಹವ್ಯಕ ಪುರವರಾಧೀಶ್ವರಿ ಹೈಗುಂದ ವೇದಿಕೆಯಲ್ಲಿ ನಡೆಯಲಿರುವ ಹವ್ಯಕ ಸಮಾವೇಶದಲ್ಲಿ ಮಧ್ಯಾಹ್ನ ೨.೩೦ ಘಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರಮಠದ ಶ್ರೀಮದ್ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವವರು. ಆಮಂತ್ರಿತರಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ, ಹವ್ಯಕ ಮಹಾಸಭಾ ರಾಜ್ಯಾಧ್ಯಕ್ಷ ಗಿರಿಧರ ಕಜೆ, ತೀರ್ಥಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಉದ್ಯಮಿ ನಾಗರಾಜ ಭಟ್ಟ ಬೆಂಗ್ರೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಹೇಶ ಕಜೆ, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ವಿಸ್ತಾರ ಮಿಡಿಯಾದ ಸಂಪಾದಕ ಹರಿಪ್ರಕಾಶ ಕೋಣೆಮನೆ, ಹೊಸದಿಗಂತ ಪತ್ರಿಕೆ ಸಂಪಾದಕ ವಿನಾಯಕ ಭಟ್ಟ ಮೂರೂರು, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಉದ್ಯಮಿ ಶ್ರೀನಿವಾಸ ಹೆಬ್ಬಾರ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ, ಉದ್ಯಮಿ ಆರ್.ಕೆ.ಹೆಗಡೆ, ನಿವೃತ್ತ ಡಿ.ಎಫ್.ಓ ಆರ್.ಜಿ.ಭಟ್ಟ ಯಲ್ಲಾಪುರ, ದಕ್ಷಿಣ ಕನ್ನಡ ಜಿ.ಪಂ ಮಾಜಿ ಅಧ್ಯಕ್ಷೆ ಶೈಲಜಾ ಕೊಂಕೊಡಿ, ಹವ್ಯಕ ಮಹಾಮಂಡಲದ ಮಾತೃ ವಿಭಾಗದ ಅಧ್ಯಕ್ಷೆ ದೇವಿಕಾ ಶಾಸ್ತ್ರಿ ಪಾಲ್ಗೊಳ್ಳಲಿದ್ದಾರೆ ಎಂದರು.

ಹವ್ಯಕ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಗುವುದು. ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ, ಸಾಂಪ್ರದಾಯಿಕ ಆಹಾರ ಮೇಳ ಮತ್ತು ವಿವಿಧ ಮಳಿಗೆಗೆಳನ್ನು ತೆರೆಯಲಾಗುತ್ತದೆ. ಹವ್ಯಕ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಆರ್.ಎನ್.ಹೆಗಡೆ ಮಾತನಾಡಿ, ಡಿ.೧೧ ರಂದು ಬೆಳಿಗ್ಗೆ ೧೦ ಘಂಟೆಗೆ ನಡೆಯಲಿರುವ ಕಾರ್ಯಕ್ರದಲ್ಲಿ ಸಮಾಜದಲ್ಲಿ ಹವ್ಯಕರ ಸಾಧ್ಯತೆ, ಆದ್ಯತೆ, ಬಾಧ್ಯತೆ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಕೃಷ್ಣಾನಂದ ಭಟ್ಟ ಬಲ್ಸೆ ಉದ್ಘಾಟಿಸಲಿದ್ದು, ಅಧ್ಯಕ್ಷ ಪ್ರೋ.ಎಂ.ಜಿ.ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಜಿ.ಜಿ.ಸಭಾಹಿತ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ವೈದ್ಯ ಹಾಗೂ ಕೆನರಾ ಎಕ್ಸಲೆನ್ಸ್ ಕಾಲೇಜಿನ ಸಂಸ್ಥಾಪಕ ಡಾ.ಜಿ.ಜಿ.ಹೆಗಡೆ, ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲೀಕ ವೆಂಕಟರಮಣ ಹೆಗಡೆ ಕವಲಕ್ಕಿ, ಕುಮಟಾ ಹವ್ಯಕ ಮಹಾಮಂಡಲ ಅಧ್ಯಕ್ಷ ಜಿ.ಎಸ್.ಹೆಗಡೆ, ಹೊನ್ನಾವರ ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಜಿ.ಹೆಗಡೆ, ಹೊನ್ನಾವರದ ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ, ಕುಮಟಾ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರಮೇಶಪ್ರಸಾದ, ಕುಮಟಾ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ, ಶಿರಸಿ ಡಿ.ಎಫ್.ಓ ಶಶಿಧರ ಹೆಗಡೆ, ಬೆಂಗಳೂರು ಡಿ.ಎಫ್.ಓ ಅಶೋಕ ಭಟ್ಟ, ಆಹಾರ ನಿರೀಕ್ಷ ಅರುಣ ಭಟ್ಟ ಕಾಶಿ, ಉದ್ಯಮಿ ವಸಂತ ರಾವ್, ಉದ್ಯಮಿ ಮಂಜುನಾಥ ಭಟ್ಟ ಉಪಸ್ಥಿತರಿರಲಿದ್ದಾರೆ ಎಂದರು.

RELATED ARTICLES  ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣ.

ಸಂಘಟನಾತ್ಮಕ ಚಟುವಟಿಕೆಯಲ್ಲಿ ಹವ್ಯಕ ಸಮಾವೇಶ ಅಪೂರ್ವ ಸಂಗಮ. ಶಂಕರಾಚಾರ್ಯರ ಪೀಠದ ೩೬ ನೆಯ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ೩೬ ಜನ ಸಾಧಕರಿಗೆ ಸನ್ಮಾನಿಸಲಿದ್ದಾರೆ. ಹವ್ಯಕರು ಹೆಚ್ಚಾಗಿ ಅಡಿಕೆ ಮತ್ತು ತೆಂಗಿನ ಬೆಳೆ ನಂಬಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕೂಲಿಕಾರ್ಮಿಕರ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಸಮಾವೇಶದಲ್ಲಿ ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹೊರ ಜಿಲ್ಲೆಗಳಲ್ಲಿ ಎಲೆಚುಕ್ಕೆ ರೋಗದಿಂದ ಅಡಿಕೆ ಮರಗಳು ಸಾವನ್ನಪ್ಪುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದು ಹವ್ಯಕ ಸಮಾಜಕ್ಕೆ ದೊಡ್ಡ ಹೊಡೆತವಾಗಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲವುಗಳನ್ನು ಎದರಿಸಲು ಇಂತಹ ಸಂಘಟನೆ ಅವಶ್ಯಕತೆಯಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸುದ್ದಿಗೋಷ್ಠಿಯಲ್ಲಿ ಸಲಹಾ ಸಮಿತಿಯ ಎಸ್.ಜಿ ಭಟ್ಟ, ವಿ.ಐ.ಹೆಗಡೆ, ಪ್ರಮುಖರಾದ ವಿ.ಜಿ.ಹೆಬ್ಬಾರ, ಜಗದೀಶ ಭಟ್ಟ, ನಿರ್ಮಲಾ ಹೆಗಡೆ, ಪತ್ರಕರ್ತ ಪ್ರವೀಣ ಹೆಗಡೆ, ಜಯದೇವ ಬಳಗಂಡಿ, ಕೃಷ್ಣಾನಂದ ಭಟ್ಟ, ಅನುರಾಧಾ ಭಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.