ಕುಮಟಾ : ತಾಲೂಕಿನ ಕೆನರಾ ಹೆಲ್ತ್ ಕೇರ್ ಸೆಂಟರ್ ನಲ್ಲಿ ಸೇವಾ ಭಾರತಿ ವತಿಯಿಂದ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಬೆನ್ನುಹುರಿ ಅಪಘಾತಕ್ಕೊಳಗಾದ (Spinal Cord Injury) ವ್ಯಕ್ತಿಗಳ ಆರೋಗ್ಯ ತಪಾಸಣೆ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸಿ, ಸಬಲೀಕರಣಗೊಳಿಸಿ, ಸಾಮಾಜಿಕ ಪುನರ್ ಸಂಯೋಜನೆ ಮಾಡುವ ಕುರಿತಾದ ಶಿಬಿರಕ್ಕೆ ಶಾಸಕರಾದ ದಿನಕರ ಶೆಟ್ಟಿ ದೀಪ ಬೆಳಗಿ ಉದ್ಘಾಟನೆ ನಡೆಸಿದರು.
ಬೆನ್ನುಮೂಳೆಯ ಅಪಘಾತಕ್ಕೊಳಗಾದ ವ್ಯಕ್ತಿಗಳು ಹೆಚ್ಚಿನ ಜೀವಿತಾವಧಿಯ ಪರಿಣಾಮಗಳನ್ನು ಪ್ರತಿದಿನ ಅನುಭವಿಸುತ್ತಾರೆ. ಸೇವಾಭಾರತಿಯವರು ಇಂತಹ ವ್ಯಕ್ತಿಗಳಿಗೆ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವುದರ ಜೊತೆಗೆ ವೈದ್ಯಕೀಯ & ಭಾವನಾತ್ಮಕ ಬೆಂಬಲ, ಆರ್ಥಿಕ ಸಬಲೀಕರಣ ಹಾಗೂ ಅವರಿಗೆ ಅಗತ್ಯವಿರುವ ಗುಣಮಟ್ಟದ ಸಾಧನ ಸಲಕರಣೆಗಳನ್ನು ಅತ್ಯಂತ ಕಡಿಮೆಬೆಲೆಗೆ ಒದಗಿಸುವ ಮೂಲಕ ಬೆನ್ನುಹುರಿಯ ಅಪಘಾತಕ್ಕೊಳಗಾಗಿ ಪರಾವಲಂಬಿಗಳಾಗಿ ಪರಿತಪಿಸುತ್ತಿರುವವರ ಬಾಳಿನಲ್ಲಿ ಹೊಸಬೆಳಕನ್ನು ಚೆಲ್ಲುವ ಕಾರ್ಯ ಮಾಡುತ್ತಿದೆ. ಇಂತಹ ಶ್ರೇಷ್ಠ ಸೇವೆಯನ್ನು ಸಲ್ಲಿಸುತ್ತಿರುವ ಸೇವಾಭಾರತಿ ಸಂಸ್ಥೆಯ ಸೇವೆ ಅಮೂಲ್ಯವಾದುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸೇವಾ ಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರು ಆಗಿರುವ ಕೆ. ವಿನಾಯಕ ರಾವ್, ಸಂಸ್ಥೆಯ ನಿರ್ದೇಶಕರಾಗಿರುವ ರಾಯನ್ ಫರ್ನಾಂಡಿಸ್, ಕೆನರಾ ಹೆಲ್ತ್ ಕೇರ್ ಸೆಂಟರ್ ನ ಸಂಸ್ಥಾಪಕ ಅಧ್ಯಕ್ಷರಾಗಿರುವ ಡಾ|| ಜಿ. ಜಿ. ಹೆಗಡೆ, ದಂತ ವೈದ್ಯರಾಗಿರುವ ಡಾ|| ಸುರೇಶ ಹೆಗಡೆ, ಡಾ|| ಸಚಿನ್ ನಾಯ್ಕ, ಡಾ. ನಾಗರಾಜ ಭಟ್ಟ, ಸೇವಾಭಾರತಿಯ ಉ. ಕ. ಜಿಲ್ಲಾ ಸಂಯೋಜಕರಾದ ಪುರುಷೋತ್ತಮ್ ಮರಾಠಿ, ಉಡುಪಿ ಜಿಲ್ಲಾ ಸಂಯೋಜಕರಾದಮನು ಆರ್., ಕಾರ್ಯಕ್ರಮದ ವ್ಯವಸ್ಥಾಪಕರಾದ ಆಶ್ರೀತ್ ಭಟ್ ಅವರು ಇದ್ದರು.