ನ್ಯೂಸ್ ಡೆಸ್ಕ್ : ಮೌಂಡೌಸ್ ಚಂಡಮಾರುತ ದೇಶದ ಹಲವೆಡೆ ತನ್ನ ಪ್ರಭಾವವನ್ನು ಬೀರುತ್ತಿದ್ದು, ಈ ಚಂಡಮಾರುತವು ಕಳೆದ ತಡರಾತ್ರಿ ತಮಿಳು ನಾಡು ಪ್ರವೇಶಿಸಿ ತೀವ್ರವಾಗಿದ್ದು, ಮಾಮಲ್ಲಪುರಂ ಬಳಿ ತೀವ್ರ ಭೂಕುಸಿತ ಉಂಟಾಗಿದೆ. ತಮಿಳುನಾಡಿನ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಾಂಡೌಸ್ ಚಂಡಮಾರುತ ಅಬ್ಬರಿಸುತ್ತಿದೆ. ಕರ್ನಾಟಕದ ದಕ್ಷಿಣ ಒಳನಾಡಿಗೆ ಇಂದು, ನಾಳೆ ಗುಡುಗು ಸಹಿತ ಮಳೆ ಪ್ರವೇಶಿಸುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯ ಮುನ್ಸೂಚನೆಯಿದೆ.
ಇಂದು ನಸುಕಿನ ಜಾವದಿಂದಲೇ 100 ಮಿಲಿ ಮೀಟರ್ ಮಳೆಯನ್ನು ದಾಟಿದೆ. ನಿನ್ನೆ ರಾತ್ರಿಯಿಂದ ಚೆನ್ನೈ ನಗರದಲ್ಲಿ 175 ರಿಂದ 200 ಮಿಮೀ ಮಳೆಯಾಗಿದೆ. ಬಲವಾದ ಗಾಳಿಯಿಂದಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಸಾರಿಗೆ ಸೇವೆಗಳೂ ಅಸ್ತವ್ಯಸ್ತಗೊಂಡಿವೆ. ತಗ್ಗು ಪ್ರದೇಶದಲ್ಲಿ ನೆಲೆಸಿದ್ದ ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಮಾಂಡೌಸ್ ಚಂಡಮಾರುತದದಿಂದಾಗಿ ಹಲವೆಡೆ ಭೂಕುಸಿತ, ಭಾರೀ ಗಾಳಿ, ಮಳೆಯಿಂದ ಪ್ರಕೃತಿ ವಿಕೋಪಗಳು ಸಂಭವಿಸಿದೆ ಎಂದು ಐಎಂಡಿ ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಎಸ್ ಬಾಲಚಂದ್ರನ್ ಪಿಟಿಐಗೆ ತಿಳಿಸಿದರು. ಚಂಡಮಾರುತವು ಭೂಮಿಗೆ ಹಾದುಹೋಗುವ ಪ್ರಭಾವದ ಅಡಿಯಲ್ಲಿ, ಹಲವಾರು ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣದಿಂದ ಭಾರೀ ಮಳೆಯು ಕಂಡುಬಂದಿದೆ.
ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೆರೆಯ ಪುದುಚೇರಿ, ಪಿಳ್ಳೈಚಾವಡಿ ಗ್ರಾಮದಲ್ಲಿ 15 ಮನೆಗಳು ಕುಸಿದಿವೆ.ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ಕಡಲೂರು, ಕಲ್ಲಕುರಿಚಿ, ವೆಲ್ಲೂರು ಮತ್ತು ರಾಣಿಪೇಟ್ ಸೇರಿದಂತೆ 15 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಾಂಡೌಸ್ ಚಂಡಮಾರುತ ಪ್ರಭಾವದಿಂದ ಬೆಂಗಳೂರಿನಲ್ಲಿ ನಿನ್ನೆ ಸಾಯಂಕಾಲ ಆರಂಭವಾದ ಮಳೆ ಇನ್ನೂ ಮುಂದುವರಿದಿದೆ. ಬೆಂಗಳೂರಿಗರು ಚಳಿಯ ಜೊತೆ ಶೀತಗಾಳಿ, ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮಳೆಯಿಂದಾಗಿ ಚಳಿ ತಾಳಲಾಗುತ್ತಿಲ್ಲ. ಆಫೀಸು, ಕಚೇರಿ ಕೆಲಸಗಳು, ವ್ಯವಹಾರಗಳು, ಶಾಲಾ ಕಾಲೇಜುಗಳಿಗೆ ತೆರಳುವವರಿಗೆ ಕಷ್ಟವಾಗುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ 3 ದಿನ ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Read Latest News