ಶಿರಸಿ: ಕಳೆದ ಹನ್ನೊಂದು ವರ್ಷದಿಂದ ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕವು ನಿರಂತರವಾಗಿ ನಡೆಸುತ್ತಿರುವ ಸಾಂಸ್ಕೃತಿಕ ಸಂಭ್ರಮದ ‘ನಮ್ಮನೆ ಹಬ್ಬ’ ಈ ಬಾರಿ ಡಿ.೧೩ರಂದು ಸಂಜೆ ೫.೦೫ರಿಂದ ಆಯೋಜಿಸಲಾಗಿದೆ. ಪ್ರಸಿದ್ಧ ಕಲಾವಿದರಿಂದ ಸಂಗೀತ ಸಂಭ್ರಮ, ವಿಶ್ವಶಾಂತಿ ಯಕ್ಷ ನೃತ್ಯ ರೂಪಕಗಳ ಸರಣಿಗೆ ನೂತನ ರೂಪಕ ಲೋಕಾರ್ಪಣೆ ಹಾಗೂ ಇಬ್ಬರು ಸಾಧಕರಿಗೆ ನಮ್ಮನೆ ಪ್ರಶಸ್ತಿ ಹಾಗೂ ನಮ್ಮನೆ ಕಿಶೋರ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ. ಸಂಜೆ೭.೦೫ಕ್ಕೆ ಮುಖ್ಯಮಂತ್ರಿ ನಾಟಕದಿಂದಲೇ ಜನಪ್ರೀಯತೆಗಳಿಸಿದ ಪ್ರಸಿದ್ಧ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಹಿರಿಯ ರಂಗಕರ್ಮಿ, ನಟ, ನಿರ್ದೇಶಕ ಬಿ.ವಿ.ರಾಜಾರಾಂ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ‘ಪ್ರಜಾವಾಣಿ’ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ‘ಯಕ್ಷ ದಿನದರ್ಶಿಕೆ’ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ವಿದ್ಯಾವಾಚಸ್ಪತಿ ವಿ. ಉಮಾಕಾಂತ ಭಟ್ಟ ಕೆರೇಕೈ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ
ಡಾ. ಜಿ.ಎಲ್.ಹೆಗಡೆ ಕುಮಟಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಮಡಿವಾಳ ಪಾಲ್ಗೊಳ್ಳಲಿದ್ದಾರೆ.
ಹಬ್ಬದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷೆ ಪ್ರಸಿದ್ಧ ಹಾಸ್ಯ
ಬರಹಗಾರ್ತಿ, ಮಾತುಗಾರ್ತಿ ಭುವನೇಶ್ವರಿ ಹೆಗಡೆ ವಹಿಸಿಕೊಳ್ಳಲಿದ್ದಾರೆ.
ಸಾಧಕರಿಗೆ ಪ್ರಶಸ್ತಿ.
ನಾಡಿನ ಸಾಧಕರನ್ನು ಅರ್ಜಿ ಪಡೆಯದೇ ಆಯ್ಕೆ ಸಮಿತಿ ಆಯ್ಕೆಗೊಳಿಸಿ ನೀಡಲಾಗುವ ನಮ್ಮನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಪ್ರಸಿದ್ಧ ನಿಸರ್ಗ ಚಿಕಿತ್ಸಾ ವೈದ್ಯ, ಲೇಖಕ ಡಾ. ವೆಂಕಟರಮಣ ಹೆಗಡೆ, ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಹೆಗಡೆ ಬೆಂಗಳೂರು ಅವರಿಗೆ ನಮ್ಮನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಮ್ಮನೆ ಕಿಶೋರ ಪುರಸ್ಕಾರವನ್ನು ಲೋಹ ತರಂಗ ವಾದಕ ಗೋಕರ್ಣದ ವಿಘ್ನೇಶ್ ಕೂರ್ಸೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಅಂದು ಸಂಜೆ ೫.೦೫ ರಿಂದ ೬.೦೫ ರವರೆಗೆ ಗಾನ ಸುಧಾದ ಮೂಲಕ ನಮ್ಮನೆ ಹಬ್ಬ ತೆರೆದುಕೊಳ್ಳಲಿದೆ. ಪ್ರಸಿದ್ದ ಗಾಯಕಿ ಸಾಗರದ ವಸುಧಾ ಶರ್ಮಾ ಗಾನ ವೈವಿಧ್ಯ ಪ್ರಸ್ತುತಗೊಳಿಸಲಿದ್ದಾರೆ. ಮೃದಂಗದಲ್ಲಿ ಎಚ್.ಎನ್.ನರಸಿಂಹಮೂರ್ತಿ, ತಬಲಾದಲ್ಲಿ ಮಹೇಶ ಹೊಸಗದ್ದೆ, ಕೊಳಲಿನಲ್ಲಿ ಸಮರ್ಥ ತಂಗಾರಮನೆ ಸಹಕಾರ ನೀಡಲಿದ್ದಾರೆ.
ವಿಶ್ವಶಾಂತಿ ಸರಣಿಗೆ ಇನ್ನೊಂದು ಕಳೆದ ಏಳು ವರ್ಷಗಳಿಂದ ನಿರಂತರವಾಗಿ ವಿಶ್ವಶಾಂತಿ ಸರಣಿಗೆ ಸಂಬಂಧಿಸಿದಂತೆ ಯಕ್ಷನೃತ್ಯ ರೂಪಕ ಪ್ರಸ್ತುತಗೊಳಿಸುವ ಇಂಡಿಯಾ ಬುಕ್ ಆಪ್ ರೆಕಾರ್ಡನಲ್ಲಿ ದಾಖಲಾದ ಕು. ತುಳಸಿ ಹೆಗಡೆ ಏಕ ವ್ಯಕ್ತಿ ಮುಮ್ಮೇಳದಲ್ಲಿ ಎಂಟನೇ ಯಕ್ಷ ನೃತ್ಯ ರೂಪಕ ‘ಗಂಗಾವತರಣ’ ಸಂಜೆ ೬:೧೫ಕ್ಕೆ ಪ್ರಥಮ ಪ್ರದರ್ಶನಕ್ಕಾಗಿ ರಂಗವೇರಲಿದೆ.
ಯಕ್ಷಕವಿ, ಬಹುಭಾಷಾ ವಿದ್ವಾಂಸರಾಗಿದ್ದ ದಿವಂಗತ ಎಂ.ಎ.ಹೆಗಡೆ ದಂಟಕಲ್ ವಿರಚಿತ, ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ನಿರ್ದೇಶನದ ನೀಡಿದ್ದಾರೆ. ಭಗೀರಥನ ತಪಸ್ಸು, ಶಿವ ಒಲಿದು ಗಂಗೆ ಧರಿಸಿ, ಪಾವನಗೊಳಿಸಲು ಗಂಗಾಧರನಾಗಿ ಗಂಗೆಯನ್ನು ಭುವಿಗೆ ಹರಿಸಿ ಪಾವನಗೊಳಿಸಿದ ಕಥೆ ಈ ರೂಪಕವು ಒಳಗೊಂಡಿದೆ. ೪೫ ನಿಮಿಷಗಳ ಕಾಲ ನೂತನ ರೂಪಕ
ಪ್ರದರ್ಶನವಾಗಲಿದೆ.
ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗ್ವತ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಸಹಕಾರ ನೀಡಲಿದ್ದಾರೆ. ರೂಪಕ ಮೂಲ ಕಲ್ಪನೆ ರಮೇಶ ಹೆಗಡೆ ಹಳೆಕಾನಗೋಡ ಅವರದ್ದಾಗಿದ್ದು, ನೃತ್ಯ ಗುರು ವಿನಾಯಕ ಹೆಗಡೆ ಕಲಗದ್ದೆ, ಜಿ.ಎಸ್.ಭಟ್ಟ ಪಂಚಲಿಂಗ ಸಹಕಾರ ನೀಡಿದ್ದಾರೆ. ಹಿನ್ನೆಲೆ ಧ್ವನಿ ಹಿರಿಯ ರಂಗಕರ್ಮಿ ಡಾ.ಶ್ರೀಪಾದ ಭಟ್ಟರದ್ದಾಗಿದೆ. ಪ್ರಸಾದನದಲ್ಲಿ ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ, ನಿರ್ವಹಣೆಯಲ್ಲಿ ಕವಯತ್ರಿ ಗಾಯತ್ರಿ ರಾಘವೇಂದ್ರ, ಧ್ವನಿ ಗ್ರಹಣ ಉದಯ ಪೂಜಾರಿ ಸಹಕಾರ ನೀಡಲಿದ್ದಾರೆ.
ನಮ್ಮನೆ ಹಬ್ಬ ಎಂದರೆ ಪಾಲ್ಗೊಳ್ಳುವ ಎಲ್ಲರ ಮನೆ ಹಬ್ಬ. ಯಾರಿಗೆಲ್ಲ ಸಾಂಸ್ಕೃತಿಕ ಆಸಕ್ತಿ ಇದೆಯೋ ಅವರೆಲ್ಲ ಭಾಗವಹಿಸಿದರೆ ನಮಗೂ ಖುಷಿ. ಎಲ್ಲವಕ್ಕೂ ನಮ್ಮ ಟ್ರಸ್ಟ್ ನಿಮಿತ್ತ ಮಾತ್ರ. ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಉತ್ಸಾಹ ಉಳಿಸುವ ಕಾರ್ಯಕ್ಕೆ ಇದು ಅಲ್ಪ ಕಾಣಿಕೆ.
-ಗಾಯತ್ರೀ ರಾಘವೇಂದ್ರ, ಕಾರ್ಯದರ್ಶಿ