ಹೊನ್ನಾವರ :ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ತೀರಾ ಇತ್ತೀಚಿನವರೆಗೂ ಯಕ್ಷಗಾನದಲ್ಲಿ ಸಕ್ರಿಯವಾಗಿದ್ದ 84 ವರ್ಷದ ರಾಮಚಂದ್ರ ಹೆಗಡೆ ಕೆಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಪಾರ್ಶವಾಯುವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಅವರು ಇಂದು ಸಂಜೆಯಿಂದ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎನ್ನಲಾಗಿದೆ. ರಾತ್ರಿ ಒಂಬತ್ತುಗಂಟೆ ಸುಮಾರಿಗೆ ಅವರು ಕೋಟ್ಯಾಂತರ ಅಭಿಮಾನಿಗಳನ್ನು ಹಾಗೂ ಕುಟುಂಬುದವರನ್ನು ಅಗಲಿದ್ದಾರೆ.

1933ರ ಜನವರಿ 1ರಂದು ಜನಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದವರು. ಏಳು ವರ್ಷ ವಯಸ್ಸಿದ್ದಾಗಲೇ ಯಕ್ಷಗಾನಕ್ಕೆ ಧುಮುಕಿದ ಹೆಗಡೆಯವರು, 14ನೇ ವಯಸ್ಸಿಗೆ ಪ್ರಮುಖ ಪಾತ್ರಗಳನ್ನು ಮಾಡಲು ಆರಂಭಿಸಿದ್ದರು. 84 ವರ್ಷದ ಇಳಿ ವಯಸ್ಸಿನಲ್ಲೂ ಅವರು ಯಕ್ಷಗಾನದ ಕುಣಿತ ಹಾಕುವುದನ್ನು ತಪ್ಪಿಸಿಲ್ಲ.

RELATED ARTICLES  ಹೆಗಡೆ ಹೆಣ್ಣುಮಕ್ಕಳ ಶಾಲೆಯಲ್ಲಿ ಗ್ರಹಣ ವೀಕ್ಷಣೆ

ಚಿಟ್ಟಾಣಿ ರಾಮಚಂದ್ರ ಹೆಗಡೆಯವರದ್ದು ಬಡಗು ತಿಟ್ಟು ಯಕ್ಷಗಾನ ಶೈಲಿ. ಆದರೆ, ರಾಮಚಂದ್ರ ಹೆಗಡೆಯವರ ಕುಣಿತ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಅವರ ಕುಣಿತವನ್ನು ಚಿಟ್ಟಾಣಿ ಘರಾನಾ ಎಂದೇ ಕರೆಯಲಾಗುತ್ತಿದೆ. ಚಿಟ್ಟಾಣಿ ಮಾಡಿರುವ ‘ಕೌರವ’, ದುಷ್ಟಬುದ್ಧಿ’, ‘ಭಸ್ಮಾಸುರ’, ‘ಕೀಚಕ’, ‘ಕರ್ಣ’, ‘ರುದ್ರಕೋಪ’, ‘ಕಂಸ’ ಮೊದಲಾದ ಪಾತ್ರಗಳು ಯಕ್ಷಗಾನ ವಲಯದಲ್ಲಿ ಬಹಳ ಜನಪ್ರಿಯವಾಗಿತ್ತು.

ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ವಿಶೇಷವೆಂದರೆ, ಈ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದರು ಅವರಾಗಿದ್ದಾರೆ.

RELATED ARTICLES  ಮುಕ್ತ ವಿಶ್ವವಿದ್ಯಾಲಯ ಉಳಿಸಲು ನಡೆಯುತ್ತಿದೆ ಹೋರಾಟ! ಮುಂಡಗೋಡಿನಲ್ಲಿ ಮನವಿ ಸಲ್ಲಿಕೆ

ಪ್ರಶಸ್ತಿ-ಪುರಸ್ಕಾರಗಳು:
2009 – ಶಿವರಾಮ್ ಕಾರಂತ್ ಪ್ರಶಸ್ತಿ
2012 – ಪದ್ಮಶ್ರೀ
2004 – ಜನಪದಶ್ರೀ
2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ
1991 – ರಾಜ್ಯೋತ್ಸವ ಪ್ರಶಸ್ತಿ
2009 – ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
2012 – ಆಳ್ವಾಸ್ ನುಡಿಸಿರಿ

 

ಮಹಾನ್ ಕಲಾವಿದರನ್ನು ಕಳೆದುಕೊಂಡ ಜನತೆ ದುಃಖದಲ್ಲಿದ್ದಾರೆ. ಯಕ್ಷರಂಗದಲ್ಲಿ ಮಿಂಚಿದ ಚಿಟ್ಟಾಣಿ ಈಗ ಮರೆಯಾಗಿರುವುದು ಕಲಾ ಲೋಕಕ್ಕೆ ಯಕ್ಷಲೋಕಕ್ಕೆ ತುಂಬಲಾರದ ನಷ್ಟ ಎನ್ನಬಹುದು.