ಕಲೆಯ ನಾದದಲ್ಲಿ ಲೀನವಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ತರಲಾಗುತ್ತಿದ್ದು ಅಲ್ಲಲ್ಲಿ ಸಾರ್ವಜನಿಕ ದರ್ಶನಕ್ಕೆ ಇದಲಾಗುತ್ತಿದೆ.ಅಪಾರ ಅಭಿಮಾನಿಗಳನ್ನು ಅಗಲಿದ ಕಲಾ ತಪಸ್ವಿಗೆ ಸತ್ವಾಧಾರ ಬಳಗದಿಂದ ನುಡಿ ನಮನ..

ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಸಾಮಾನ್ಯ ಬಡಕುಟುಂಬವೊಂದರಲ್ಲಿ 18ನೇ ಸೆಪ್ಟೆಂಬರ್ 1935ರಂದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಕುಳಿ ಎಂಬಲ್ಲಿ ಜನಿಸಿದರು. ತಂದೆ ಸುಬ್ರಾಯ ಹೆಗಡೆ, ತಾಯಿ ಗಣಪಿ ಅಮ್ಮ. ಚಿಕ್ಕಂದಿನಲ್ಲೇ ಆ ಕಾಲದ ಮಹಾನ್ ಯಕ್ಷಗಾನ ಕಲಾವಿದರಾದ ಮೂಡ್ಕಣಿ ನಾರಾಯಣ ಹೆಗಡೆ, ಕೊಂಡದಕುಳಿ ರಾಮ ಹೆಗಡೆ, ಕೆರೆಮನೆ ಶಿವರಾಮ ಹೆಗಡೆ ಮೊದಲಾದವರ ವೇಷ ವೈಭವಕ್ಕೆ ಮನಸೋತು ತಾನೂ ವೇಷಧಾರಿಯಾಗಬೇಕೆಂಬ ಕನಸು ಕಂಡರು. ಪುರೋಹಿತ ವಂಶದ ಅವರ ಮನೆಯಲ್ಲಿ ಯಕ್ಷಗಾನವೆಂದರೆ ತುಸು ಮೈಲಿಗೆಯೇ. ಶಾಲೆಗೆ ಹೋಗುವುದನ್ನು ಬಿಟ್ಟು ಗೇರುಗುಡ್ಡದ ಮೇಲೆ ಯಕ್ಷಗಾನ ಕುಣಿತಕ್ಕೆ ಮೊದಲು ಮಾಡಿದ ಬಾಲಕ ಚಿಟ್ಟಾಣಿಯನ್ನು ಅವರ ಅಧ್ಯಾಪಕ ಕರ್ಕಿ ಭಟ್ಟ ಮಾಸ್ತರರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಇದರ ಫಲವಾಗಿ ಬಾಲಕ ಚಿಟ್ಟಾಣಿಗೆ ಬಾಳೆಗದ್ದೆ ಮೇಳದಲ್ಲಿ ಅಗ್ನಿಯ ವೇಷ ಮಾಡುವ ಅವಕಾಶ ಒದಗಿ ಬಂತು. ಅನಂತರ ಮೂಡ್ಕಣಿ ಮೇಳದಲ್ಲಿ ಅಭಿಮನ್ಯುವಿನ ಪಾತ್ರ ಮಾಡಿ ಜನಮನ ಸೆಳೆದರು. ಗುಂಡಬಾಳಾ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಗೆಜ್ಜೆ ಕಟ್ಟಿದ ಮೇಲಂತೂ ಹದಿಹರೆಯದ ಚಿಟ್ಟಾಣಿ ಬೇಡಿಕೆಯ ಕಲಾವಿದರಾಗಿ ಮೂಡಿಬಂದರು. ಮೂರೂರು ಮೇಳದಲ್ಲಿ ಅಭಿಮನ್ಯುವಿನ ಪಾತ್ರ ಮಾಡಿ ಜನಮನ ಸೆಳೆದರು. ಮೂರೂರು ಮೇಳದಲ್ಲಿ ಒಮ್ಮೆ ಭೋಜ ಕಾಳಿದಾಸ ಪ್ರಸಂಗದ ಕಲಾಧರನ ಪಾತ್ರ ನಿರ್ವಹಿಸಿ ಅತ್ಯಂತ ಪ್ರಸಿದ್ಧಿಯನ್ನು ಪಡೆದರು. ಅನಂತರ ಎಷ್ಟೋ ಕಾಲದವರೆಗೆ ಅವರನ್ನು ಕಲಾಧರ ಹೆಗಡೆ ಎಂದೇ ಜನ ಗುರುತಿಸುವಂತಾಯಿತು. ಹೀಗೆ ಆರಂಭವಾದ ಅವರ ವೃತ್ತಿ ಜೀವನ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಹತ್ತಾರು ಮೇಳಗಳಲ್ಲಿ ಮುಂದುವರಿಯಿತು. ಮೂರೂರು ಮೇಳ (1957), ಗುಂಡಬಾಳಾ ಮೇಳ (1962), ಇಡಗುಂಜಿ ಮೇಳ (1965), ಕೊಳಗಿಬೀಸ್ ಮೇಳ (1967), ಅಮೃತೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ (1984), ಸಾಲಿಗ್ರಾಮ ಮೇಳ, ಬಚ್ಚಗಾರ ಮೇಳ (1989), ಮಾರಿಕಾಂಬಾ ಮೇಳ, ಪೆರ್ಡೂರ ಮೇಳ, ಹೀಗೆ ಚಿಟ್ಟಾಣಿಯವರ ವೃತ್ತಿ ಮೇಳದ ವ್ಯವಸಾಯ ಐದು ದಶಕಗಳ ಕಾಲಾವಧಿಯನ್ನು ದಾಟಿ ನಿಂತಿದೆ. ಈಗಲೂ ಅವರು ಸಕ್ರಿಯರಾಗಿ ತಮ್ಮ ಮಗನೇ ನಡೆಸುತ್ತಿರುವ ಬಂಗಾರಮಕ್ಕಿ ಎಂಬ ಮೇಳದಲ್ಲಿ ಕಲಾವ್ಯವಸಾಯ ನಡೆಸುತ್ತಿದ್ದಾರೆ. ಅವರ ಇಬ್ಬರು ಗಂಡು ಮಕ್ಕಳಾದ ನರಸಿಂಹ ಚಿಟ್ಟಾಣಿ ಮತ್ತು ಸುಬ್ರಹ್ಮಣ್ಯ ಚಿಟ್ಟಾಣಿ ಯಕ್ಷಗಾನದ ಉತ್ತಮ ವೇಷಧಾರಿಗಳಾಗಿ ಗೇರುಸೊಪ್ಪ ಹತ್ತಿರದ ಅಳ್ಳಂಕಿಯ ಗುಡ್ಡೆಕೆರೆಯಲ್ಲಿ ವಾಸವಾಗಿದ್ದಾರೆ.

ಚಿಟ್ಟಾಣಿ ಎಂಬ ಮೂರಕ್ಷರದ ಶಬ್ದಕ್ಕೆ ಯಕ್ಷಗಾನ ವಲಯದಲ್ಲಿ ಚೆಂಡೆ ಮದ್ದಳೆಗಳ ನಿನಾದಕ್ಕಿಂತಲೂ ಹೆಚ್ಚು ಶಕ್ತಿಯಿದೆ. ಬಡಗುತಿಟ್ಟಿನ ಯಕ್ಷಗಾನ ಪ್ರಪಂಚದ ಮೇರು ನಟರಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ನೃತ್ಯ ಮತ್ತು ಅಭಿನಯಕ್ಕೆ ಪರ್ಯಾಯ ಹೆಸರು. ಶಿಕ್ಷಣ, ವ್ಯವಸ್ಥಿತ ಕಲಿಕೆ, ಆನುವಂಶೀಯತೆಗಳಿಲ್ಲದೆ ಕೇವಲ ಸ್ವಂತ ಪರಿಶ್ರಮದಿಂದ ಮೂಡಿ ಬಂದವರು. ಕೆಲವು ಪಾತ್ರಗಳಿಗೆ ಅವರೇ ಅನಿವಾರ್ಯವೆಂದೆನಿಸುವಷ್ಟು ಜನಮಾನಸದಲ್ಲಿ ನೆಲೆ ನಿಂತ ಪ್ರತಿಭಾವಂತರು. ವಿಶೇಷವಾಗಿ ಶೃಂಗಾರರಸದ ಅಭಿವ್ಯಕ್ತಿಯಲ್ಲಂತೂ ಹೊಸ ಇತಿಹಾಸವನ್ನೇ ಬರೆದ ಅಪ್ರತಿಮ ಕಲಾವಿದ, ಕೀಚಕ, ಭಸ್ಮಾಸುರ, ಸಾಲ್ವ, ಕಾರ್ತವೀರ್ಯ, ಕೌರವ ಮುಂತಾದ ಪಾತ್ರಗಳ ರಂಗ ವೈಭವದಲ್ಲಿ ಮೆರೆದು ಅರ್ಧಶತಮಾನಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗಭೂಮಿಯನ್ನು ಆಳಿದ ನಟ ಸಾಮ್ರಾಟರು ಅವರು. ರಂಗಪ್ರವೇಶದಿಂದ ತೊಡಗಿ ಕೊನೆಯ ದೃಶ್ಯದವರೆಗೂ ಒಂದೇ ರೀತಿ ರಂಗವನ್ನು ಜೀವಂತವಾಗಿರಿಸಬಲ್ಲ ರಸ ಚೈತನ್ಯ ಅವರದು. ಮಿಂಚುನಡೆ, ಅದ್ಭುತ ಲಯಸಿದ್ಧಿ, ಆಕರ್ಷಕ ನೃತ್ಯಗಳಿಂದ ಪರಂಪರೆ ಮತ್ತು ಹೊಸತನಗಳನ್ನು ಏಕಕಾಲದಲ್ಲಿ ಮೊಗೆಮೊಗೆದು ಕೊಡಬಲ್ಲ ಪ್ರತಿಭೆ. ಎಪ್ಪತ್ತರ ಈ ಇಳಿಹರೆಯದಲ್ಲಿ ದಣಿವರಿಯದ ಕಲಾಸೃಷ್ಟಿಯ ಅದಮ್ಯ ಶಕ್ತಿ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿಂದು 133 ಜನರಲ್ಲಿ ಕರೊನಾ ಪಾಸಿಟೀವ್ : ಭಟ್ಕಳದಲ್ಲಿ ಒಂದು ಸಾವು

ಚಿಟ್ಟಾಣಿಯವರ ಪಾತ್ರ ಸೃಷ್ಟಿ ಅನನ್ಯವಾದುದು. ಅವರು ನಿರ್ವಹಿಸುವ ಪಾತ್ರಗಳಲ್ಲಿ ಚಿಟ್ಟಾಣಿ ತನವೆಂಬುದು ಮೇಳೈಸಿರುತ್ತದೆ. ದಿ. ಕೆರೆಮನೆ ಶಿವರಾಮ ಹೆಗಡೆಯವರ ಬಳಿಕ ರಂಗಪ್ರವೇಶದಲ್ಲೇ ವಿದ್ಯುತ್ ಸಂಚಾರವನ್ನುಂಟು ಮಾಡಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆಯಿಡುವ ಸಾಮಥ್ರ್ಯವಿರುವುದು ಚಿಟ್ಟಾಣಿಯವರಲ್ಲಿ ಮಾತ್ರ. ಗದಾಯುದ್ಧದ ಕೌರವ, ಭೀಷ್ಮ, ವಿಜಯದ ಸಾಲ್ವ, ಚಂದ್ರಾವಳೀವಿಲಾಸದ ಕೃಷ್ಣ, ಚಂದ್ರಹಾಸಚರಿತ್ರೆಯ ದುಷ್ಟಬುದ್ಧಿ ಅವರ ಸ್ವೋಪಜ್ಞ ಸೃಷ್ಟಿ. ಜರಾಸಂಧ, ಕೀಚಕ, ಭಸ್ಮಾಸುರ, ಕಾರ್ತವೀರ್ಯ ಮುಂತಾದ ಪಾತ್ರನಿರ್ಮಿತಿಗಳಲ್ಲಿ ಅವರ ಸಾಧನೆ ಗಮನಾರ್ಹವಾದುದು. ಬಡಾಬಡಗುತಿಟ್ಟು ಎಂದು ಹೇಳಲಾಗುವ ಉತ್ತರ ಕನ್ನಡ ಪರಂಪರೆಯಲ್ಲಿ ದಿ. ಮೂಡ್ಕಣಿ ನಾರಾಯಣ ಹೆಗಡೆ ಮತ್ತು ದಿ. ಕೆರೆಮನೆ ಶಿವರಾಮ ಹೆಗಡೆಯವರ ಹಸ್ತಾಭಿನಯ, ನೃತ್ಯ, ರಂಗ ಚಲನೆಗಳು, ಒಂದು ಘರಾನಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಚಿಟ್ಟಾಣಿಯವರು ಈ ಇಬ್ಬರು ಕಲಾವಿದರ ಉತ್ತಮಾಂಶಗಳನ್ನು ತನ್ನದಾಗಿಸಿಕೊಂಡು ಸೃಜನಶೀಲತೆಯಿಂದ ಅದಕ್ಕೆ ಹೊಸಮೆರುಗನ್ನು ನೀಡಿರುವುದು ಐತಿಹಾಸಿಕ ಸತ್ಯ. ಅವರ ನೃತ್ಯಕ್ಕೆ ಅವರದೇ ಆದ ಭಾಷೆ ವ್ಯಾಕರಣಗಳಿವೆ. ಅಸಮಾನ್ಯವಾದ ಲಯಪ್ರಜ್ಞೆ ಅದರ ಜೀವಧಾತು. ಪ್ರತಿನಿತ್ಯವೂ ವಿನೂತನವಾದ ಚಿಂತನೆಯಿಂದ ಪಾತ್ರಾಭಿವ್ಯಕ್ತಿಯಲ್ಲಿ ವೈವಿಧ್ಯವನ್ನು ಸಾಧಿಸುವ ಅವರ ಕಲೆಗಾರಿಕೆ ಅಪೂರ್ವವಾದುದು. ಅವರದ್ದೇ ಎಂದು ಗುರುತಿಸಬಹುದಾದ ಹೆಜ್ಜೆಗಳು ಈಗ ಅವರನ್ನು ಅನುಕರಿಸಹೊರಟವರ ಸೊತ್ತಾಗಿರುವುದು ಒಂದು ಕಟು ವ್ಯಂಗ. ಅವರ ಅಭಿನಯದಲ್ಲಿ ಹುಬ್ಬು, ತುಟಿ, ಕಣ್ಣು, ಗಲ್ಲ, ಹಸ್ತ, ಪ್ರತಿಯೊಂದೂ ಸಮರಸದಿಂದ ಪಾಲ್ಗೊಳ್ಳುತ್ತವೆ. ಶೃಂಗಾರದ ಅಭಿವ್ಯಕ್ತಿಯಲ್ಲಂತೂ ಚಿಟ್ಟಾಣಿಯವರ ಅಭಿನಯ ಅಕ್ಷರಗಳನ್ನು ಮೀರಿದ ಅನನ್ಯ ಸೃಷ್ಟಿ, ಅದು ಕೇವಲ ಅನುಭವೈಕ್ಯವೇದ್ಯ. ಸಾವಿರ ಮಾತುಗಳನ್ನು ಒಂದು ಕಣ್ಣ ನೋಟದಲ್ಲಿ ಹೇಳುವ ಅವರ ಆಂಗಿಕಾಭಿನಯಕ್ಕೆ ಚಿಟ್ಟಾಣಿಗೆ ಚಿಟ್ಟಾಣಿಯೇ ಸಾಟಿ. ಅದಕ್ಕೆಂದೇ ಯಕ್ಷಗಾನ ಕಲಾಭಿಮಾನಿಗಳು ಅವರನ್ನು ಶೃಂಗಾರರಾಜ ಎಂದೇ ಪ್ರೀತಿಯಿಂದ ಕೊಂಡಾಡುತ್ತಾರೆ.

RELATED ARTICLES  ಪರೇಶ್ ಮೇಸ್ತಾರನ್ನು ಸ್ಮರಿಸಿದ ಶಾಸಕ‌ ಸುನೀಲ್‌ ನಾಯ್ಕ: ಅವರ ಬಗ್ಗೆ ಬರೆದಿದ್ದೇನು ಗೊತ್ತಾ?

ವೀರರಸದ ಅಭಿನಯದಲ್ಲಿ ಅವರು ಹಿಂದೆ ಬಿದ್ದವರಲ್ಲ, ಹಿರಣ್ಯಕಶ್ಯಪು, ರಾವಣ, ಕಂಸ, ಬಲಿ, ಪರಶುರಾಮ, ದುರ್ಜಯ ಮುಂತಾದ ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ಚುರುಕಿನ ನಡೆ, ರಭಸದ ರಂಗಪ್ರವೇಶ, ಆಕರ್ಷಕ ಯುದ್ಧ ಕ್ರಮಗಳು, ವೈವಿಧ್ಯ ಪೂರ್ಣ ಹೆಜ್ಜೆಗಳು ಒಂದಕ್ಕೊಂದು ಮೇಲ್ಮೈಯನ್ನು ಸಾಧಿಸುತ್ತವೆ. ಕರುಣ, ಶೋಕರಸಗಳಲ್ಲಿ ಸ್ವಲ್ಪ ಸೋತಂತೆ ಕಂಡರೂ ಗದಾಯುದ್ಧದ ಕೌರವನ ಪಾತ್ರ ಅಧ್ಯಯಯನ ಯೋಗ್ಯವೆನಿಸಿದೆ. ಚಿಟ್ಟಾಣಿಯವರ ಆಳ್ತನವೂ ಅವರ ವೇಷದ ಆಕರ್ಷಣೆಗೆ ಕಾರಣ. ಹಿತಮಿತವಾದ ಎತ್ತರ, ಅಗಲವಾದ ಹಣೆ, ಜ್ವಾಜ್ವಲ್ಯ ಮಾನವಾದ ಕಣ್ಣು, ಬಳ್ಳಿಯಂತೆ ಬಳುಕುವ ಶರೀರ ಹಾಗೂ ಎಷ್ಟು ಕುಣಿದರೂ ಸೋಲದ ಕಾಲುಗಳು ಅವರಿಗೆ ದೈವದತ್ತವಾಗಿ ಬಂದ ಬಳುವಳಿ. ಅವರ ಸ್ವರ ದಪ್ಪವೆನಿಸಿ ತುಸು ಒಡಕು ಎಂದೆನಿಸಿದರೂ ಅದು ಎಲ್ಲ ಪಾತ್ರಗಳಿಗೂ ಒಪ್ಪುತ್ತದೆ. ಕಿವಿಗೆ ಇಂಪಲ್ಲವೆಂದು ಭಾಸವಾದರೂ ಅದರಲ್ಲಿ ಶ್ರುತಿಬದ್ಧತೆಯ ಆಪ್ಯಾಯಮಾನತೆಯಿದೆ. ಶಾಲಾಶಿಕ್ಷಣದ ಕೊರತೆಯಿದ್ದರೂ ದೇಸೀಶೈಲಿಯ ವಾಕ್ಚಾತುರ್ಯದಿಂದ ಅವರು ಜನಮನವನ್ನು ಗೆದ್ದಿದ್ದಾರೆ. ಸಹಕಲಾವಿದರೊಂದಿಗೆ ಸ್ನೇಹಭಾವದಿಂದ ವರ್ತಿಸುವ, ಕಹಿಘಟನೆಗಳನ್ನು ಶೀಘ್ರವಾಗಿ ಮರೆತು ಬಿಡುವ, ಇಡೀ ರಂಗಕೃತಿಯನ್ನು ಒಟ್ಟಂದಿನಿಂದ ಪರಿಗ್ರಹಿಸಿ ಅದರ ಯಶಸ್ಸಿಗೆ ದುಡಿಯುವ ತಪಸ್ಸು ಚಿಟ್ಟಾಣಿಯವರದು. ಪಾತ್ರವೊಂದರ ಎಲ್ಲ ಪದ್ಯಗಳಿಗೂ ಉದಾಸೀನ ಮಾಡದೆ ನರ್ತಿಸಿ, ಪ್ರೇಕ್ಷಕರಿಗೆ ಮುದನೀಡುವ ಪ್ರಾಮಾಣಿಕತೆ ಅವರ ಗೆಲುವಿನ ಗುಟ್ಟು.

ಚಿಟ್ಟಾಣಿಯವರಿಗೆ ಅವರ ಅಸಂಖ್ಯ ಅಭಿಮಾನಿಗಳು ನೀಡಿದ ಪ್ರಶಂಸೆಯ ಮಹಾಪೂರದ ಎದುರು ಪ್ರಶಸ್ತಿಗಳು ಕುಬ್ಜವಾಗುತ್ತವೆ. ವೇಷ ರಂಗಕ್ಕೆ ಪ್ರವೇಶವಾದೊಡನೆ ಕೇಳಿ ಬರುವ ಕಿವಿಗಡಚಿಕ್ಕುವ ಚಪ್ಪಾಳೆ ಅವರ ಮೇಲಿನ ತುಂಬು ಅಭಿಮಾನಕ್ಕೆ ನಿದರ್ಶನ. ಅವರ ಅಭಿಮಾನಿಗಳು ಚಿಟ್ಟಾಣಿಯವರೆಗೆ ಬೆಳ್ಳಿಯ ಕಿರೀಟ ತೊಡಿಸಿ ಆನಂದಪಟ್ಟಿದ್ದೂ ಉಂಟು. ಯಕ್ಷರತ್ನ, ರಸಿಕರ ರಾಜ, ನಟ ಸಾಮ್ರಾಟ ಮುಂತಾದ ಬಿರುದುಗಳನ್ನು ನೀಡಿ ಸನ್ಮಾನಿಸಿದ್ದೂ ಉಂಟು. ಹಲವಾರು ಊರುಗಳಲ್ಲಿ ನಡೆದ ಸಂಘ ಸಂಸ್ಥೆಗಳ ಸನ್ಮಾನಕ್ಕೆ ಲೆಕ್ಕವಿಲ್ಲ.

ಇತ್ತೀಚಿಗೆ ಅವರ ಆತ್ಮಕಥನ ‘ನಿಮ್ಮ ಚಿಟ್ಟಾಣಿ ಪ್ರಕಟವಾಗಿದೆ. ಅವರ ಆತ್ಮೀಯರು ಸೇರಿ `ರಸರಾಜ’ ಎಂಬ ಅಭಿನಂದನ ಗ್ರಂಥವನ್ನೂ ಅರ್ಪಿಸಿದ್ದಾರೆ. ಕರ್ನಾಟಕ ಸರಕಾರದ ರಾಜ್ಯಪ್ರಶಸ್ತಿಯ ಗೌರವ ಕೂಡಾ ಲಭಿಸಿದೆ. ಹಾಗೆಯೇ ಪ್ರತಿಷ್ಠಿತ ಜಾನಪದಶ್ರೀ ಪ್ರಶಸ್ತಿಯಿಂದಲೂ (2003) ರಾಜ್ಯಸರ್ಕಾರ ಅವರನ್ನು ಸನ್ಮಾನಿಸಿರುವುದು ಅವರ ಸುದೀರ್ಘ ಕಲಾವ್ಯವಸಾಯಕ್ಕೆ ಸಂದ ನಿಜವಾದ ಗೌರವವಾಗಿದೆ.

IMG 20171004 WA0006
ಇಂಥಹ ಅನನ್ಯ ಚೇತನ ಇಂದು ನಮ್ಮೆಲ್ಲರನ್ನು ಅಗಲಿರುವುದು ಕಲಾ ಲೋಕಕ್ಕೆ ತುಂಬಲಾರದ ನಷ್ಟ, ಇಂತಹ ಕಲಾ ತಪಸ್ವಿಗೆ ಭಕ್ತಿಯ ಪ್ರಣವ ಸಲ್ಲಿಸುತ್ತೇವೆ.