ಹೊನ್ನಾವರ : ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಜೀಯು ಅಭಿನಂದನಾ ಸಮಿತಿ ಆಯೋಜಿಸಿದ್ದ ‘ಜೀಯು- 75 ಅಮೃತಾಭಿನಂದನೆ’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಜನತೆಯ ಭಾವನೆಯ ಧ್ವನಿಯಾಗಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಆ ಕಾರ್ಯದ ಮೂಲಕ ಜೀಯು ತಾಲೂಕಿನಲ್ಲಿ ಚಿರಪರಿಚಿತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಒಂದು ಪ್ರದೇಶದ ಬೆಳವಣಿಗೆಗೆ, ಪ್ರಗತಿಗೆ, ಅಭಿವೃದ್ಧಿಗೆ ಮತ್ತು ಜನತೆಯ ಮನಸ್ಸು ಪರಿವರ್ತನೆ ಮಾಡುವಲ್ಲಿ ಜೀಯು ಅವರ ಪಾತ್ರ ಮಹತ್ವದ್ದಾಗಿದೆ. ಅವರ ಅಪಾರವಾದ ಕಾಳಜಿ ಮತ್ತು ಬರವಣಿಗೆಯಿಂದಲೇ ಅವರು ಎಲ್ಲರಿಗೂ ಚಿರಪರಿಚಿತರಾದವರು ಹಾಗೂ ಮೆಚ್ಚುಗೆಗಳಿಸಿದವರು ಎಂದರು.
ಪ್ರಾದೇಶಿಕವಾದ ವರದಿಗಳು ಆಕರ್ಷಣೀಯವಾಗಿದ್ದರೆ ಮಾತ್ರ ಪತ್ರಿಕೆಗಳ ಓದುಗರ ಸಂಖ್ಯೆಯೂ ಹೆಚ್ಚುತ್ತದೆ. ಜನರ ಭಾವನೆಗಳನ್ನು ವ್ಯಕ್ತಪಡಿಸಲು ಪತ್ರಿಕೆಗಳು ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಮೊಬೈಲ್, ಟಿವಿ ಇನ್ನಿತರ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದರೂ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಪತ್ರಿಕೆಗಳು ಮಾರುಕಟ್ಟೆಗಿಂತ ಹೆಚ್ಚಾಗಿ ಸಮಗ್ರ ಮಾಹಿತಿಗಳಿಂದಾಗಿ ಇನ್ನೂ ಜೀವಂತವಾಗಿದ್ದು,
ಎಲ್ಲಾ ಪತ್ರಿಕಾ ವರದಿಗಾರರಿಗೆ ನಾನು ಅಭಿನಂದಿಸುತ್ತೇನೆ ಎಂದರು.
ನೆರೆಯ ದಕ್ಷಿಣಕನ್ನಡಕ್ಕೆ ಹೋಲಿಸಿದರೆ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಅಲ್ಲಿಯ ಶೈಕ್ಷಣಿಕ ಹಾಗೂ ಬ್ಯಾಂಕಿಗ್ ಕ್ಷೇತ್ರದ ಅಭಿವೃದ್ಧಿ ಇಲ್ಲಿಯೂ ಕಾಣಬೇಕಿದೆ. ಮಣಿಪಾಲ ಎನ್ನುವ ಚಿಕ್ಕ ಹಳ್ಳಿಯು ಕೇಂದ್ರ ಕಛೇರಿಯನ್ನಾಗಿಸಿಕೊಂಡು ಉದಯವಾಣಿ ಪತ್ರಿಕೆ ಇಂದು ರಾಜ್ಯಮಟ್ಟದ ಹೆಮ್ಮೆಯ ಪತ್ರಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಯ ಮುದ್ರಣವೂ ಅಷ್ಟೇ ಸುಂದರವಾಗಿದ್ದು,ಓದುಗರ ಪ್ರೀತಿ ಗಳಿಸಿಕೊಂಡು ರಾಜ್ಯದೆಲ್ಲದೆ ಜನಪ್ರಿಯತೆ ಉಳಿಸಿಕೊಂಡಿದೆ. ಅಂತಹ ಸಂಸ್ಥೆಯ ವರದಿಗಾರರಾಗಿ 50 ವರ್ಷದ ಸುದೀರ್ಘ ಕಾಲ ಸೇವೆ ಸಲ್ಲಿಸಿರುವುದು ಅಭಿನಂದನಾರ್ಹ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಯು.ಭಟ್ಟ, ಜಿಲ್ಲೆಯ ಜನರು ನನ್ನ ಮೇಲಿಟ್ಟ ಪ್ರೀತಿ ವಿಶ್ವಾಸಕ್ಕೆ ನಾನು ಎಂದಿಗೂ ಚಿರರುಣಿಯಾಗಿದ್ದೇನೆ. ಅನೇಕ ಹೋರಾಟಗಳು, ಅಭಿವೃದ್ಧಿ ಬಗೆಗಿನ ಸಮಗ್ರ ವರದಿಯನ್ನು ಪ್ರಕಟಿಸಿ ಗಮನ ಸೆಳೆದಿದ್ದೇನೆ. ನನ್ನನ್ನು ಅಭಿನಂದಿಸುವ ಕಾರ್ಯಕ್ರಮ ನನಗೆ ಸುದಿನವಾಗಿದೆ. 50 ವರ್ಷಗಳ ಪರ್ಯಂತ ನನ್ನನ್ನು ಪ್ರೀತಿಪೂರ್ವಕವಾಗಿ ಪ್ರೋತ್ಸಾಹಿಸುತ್ತಾ ಬಂದಿರುವ ಎಲ್ಲರಿಗೂ ಕೃತಜ್ಞತಾಪೂರ್ವಕವಾಗಿ ವಂದಿಸುತ್ತೇನೆ ಎಂದರು. ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಮಾತನಾಡಿ, ಜೀಯು 50 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿದ್ದು, ಸಮಾಜದ ಒಳಿತು ಕೆಡುಕನ್ನು ಸಮಾಜದ ಮುಂದಿಟ್ಟಿದ್ದಾರೆ.
ಉತ್ತರಕನ್ನಡ ಮಣಿಪಾಲದ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಏಳುಬೀಳುಗಳಿಗೆ ಧೃತಿಗೆಡದೆ ಜೀವನವನ್ನು ನಡೆಸುತ್ತಿದ್ದು, ಇವರ ಜೀವನ ಇತರರಿಗೆ ನಿದರ್ಶನವಾಗಿದೆ ಎಂದರು. ಪತ್ರಿಕೋದ್ಯಮದ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ. ಮಾಡಿರುವ ಜಿ.ಯು.ಭಟ್ ದಂಪತಿಯನ್ನು ವೇದಿಕೆಯಲ್ಲಿ ಅಭಿನಂದನಾ ಸಮಿತಿ ಹಾಗೂ ವಿವಿಧ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳಿಸಿದ ಸನ್ಮಾನಿಸಿ ಗೌರವಿಸಲಾಯಿತು. ಜೀಯು ಅಭಿನಂದನಾ ಗ್ರಂಥವಾದ ‘ಜೀವನದಿ’ ಅಂಕಣ ಬರಹಗಳ ಸಂಕಲನವಾದ ‘ಜನವಾಣಿ’ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಆರ್.ಎಸ್.ರಾಯ್ಕರ ವಹಿಸಿದ್ದರು. ಸಾಹಿತಿ ಗಜಾನನ ಶರ್ಮಾ ಅಭಿನಂದನಾ ನುಡಿಗಳನ್ನಾಡಿದರು. ನಾಗರಾಜ ಹೆಗಡೆ ಅಪಗಾಲ ಗಣ್ಯರನ್ನ ಪರಿಚಯಿಸಿದರೆ, ದಿನಕರ ಶೆಟ್ಟಿ, ಪ್ರಶಾಂತ ಮೂಡಲಮನೆ ಮತ್ತು ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶಾಸಕರಾದ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಜಿ.ಪಂ. ಮಾಜಿ ಸದಸ್ಯ ಶಿವಾನಂದ ಹೆಗಡೆ, ಕೃಷ್ಣಗೌಡ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ ಯು.ಪೈ, ಅಭಿನಂದನಾ ಸಮಿತಿಯ ಅಧ್ಯಕ್ಷ ವೆಂಕಟಮಣ ಹೆಗಡೆ ಕವಲಕ್ಕಿ, ಕಾರ್ಯಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಪ.ಪಂ.ಸದಸ್ಯರು, ವಿವಿಧ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಸಂಘ- ಸಂಸ್ಥೆಯ ಪ್ರಮುಖರು ಹಾಜರಿದ್ದರು.