ಕುಮಟಾ: ಶ್ರೀಕ್ಷೇತ್ರ ಗೋಕರ್ಣದ ಅಶೋಕೆಗೆ ಹೋಗುವ ಓಂ ಬೀಚ್ ಕ್ರಾಸ್‌ನ ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದನ್ನು ಖಂಡಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಗೋಕರ್ಣ ಪಿಡಿಒಗೆ ಮನವಿ ಸಲ್ಲಿಸಿದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಆ ಭಾಗದ ಗ್ರಾಮಸ್ಥರು ಗೋಕರ್ಣ ಗ್ರಾಪಂಗೆ ತೆರಳಿ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದಾಗುತ್ತಿರುವ ಸಮಸ್ಯೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕುಮಟಾ ತಾಲೂಕಿನ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಗೋಕರ್ಣದ ಅಶೋಕೆಗೆ ಹೋಗುವ ಓಂ ಬೀಚ್ ಕ್ರಾಸ್‌ನ ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಕಸದ ರಾಶಿ ಎಲ್ಲಂದರಲ್ಲಿ ಬೀಸಾಡುವುದರಿಂದ ಈ ಭಾಗದ ಸ್ವಚ್ಛ ಪರಿಸರ ಹಾಳಾಗುವಂತಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಜಾನುವಾರುಗಳು ಸೇವಿಸುವುದರಿಂದ ಆ ಭಾಗದ ಅನೇಕ ಗೋವುಗಳು ಸಾವಿಗೀಡಾಗುವಂತಾಗಿದೆ.

RELATED ARTICLES  ತೆನಾಲಿ ಮಹಾಪರೀಕ್ಷೆಯನ್ನು ಪೂರೈಸಿದ ಮಹೇಶ ಭಟ್ಟ


ಪ್ರಾಣಿ, ಪಕ್ಷಿಗಳು ತ್ಯಾಜ್ಯಗಳನ್ನು ಎಳೆದಾಡಿ ಎಲ್ಲಾಕಡೆ ಚೆಲ್ಲಾಪಿಲ್ಲಿ ಮಾಡುವುದರಿಂದ ದುರ್ವಾಸನೆಗೂ ಕಾರಣವಾಗಿದೆ. ಸುತ್ತಲಿನ ಪರಿಸರ ಹದಗೆಟ್ಟು ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಅಲ್ಲದೇ ಈ ಭಾಗದಲ್ಲಿ ತ್ಯಾಜ್ಯಗಳನ್ನು ಹಾಕುವುದಕ್ಕೆ ಸ್ಥಳೀಯರ ತೀವ್ರ ವಿರೋಧ ಕೂಡ ಇದೆ. ಹಾಗಾಗಿ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಜೊತೆಗೆ ಈ ಭಾಗದ ಜನತೆಗೆ ತ್ಯಾಜ್ಯಗಳಿಂದಾಗುತ್ತಿರುವ ತೊಂದರೆಯನ್ನು ಪರಿಹರಿಸಿಕೊಡಬೇಕು. ತ್ಯಾಜ್ಯಗಳನ್ನು ಈ ಭಾಗದಲ್ಲಿ ತಂದು ಹಾಕುವ ಕಾರ್ಯವಾಗಬಾರದು. ಈ ಬಗ್ಗೆ ಗೋಕರ್ಣ ಗ್ರಾಪಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಮನವಿ ಸ್ವೀಕರಿಸಿದ ಗ್ರಾಪಂ ಪಿಡಿಒ ಅವರು ಈ ಬಗ್ಗೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.

RELATED ARTICLES  16 ರಂದು ‘ಕೃಷ್ಣಂ ವಂದೇ ಜಗದ್ಗುರುಮ್’


ಮನವಿ ಸಲ್ಲಿಕೆಯಲ್ಲಿ ಗ್ರಾಮಸ್ಥರಾದ ಗಂಗು ಗೌಡ, ದುರ್ಗು ಗೌಡ, ದೇವು, ಬೀರ, ಸಣ್ಣು, ವಿಕ್ರಾಂತ ಸೇರಿದಂತೆ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಇದ್ದರು.