ಹೊನ್ನಾವರ ; ತಾಲೂಕಿನ ಕರ್ಕಿಯ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಉಜ್ವಲ ಯೋಜನೆಯಡಿ ಅರ್ಹ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್‍ಗಳೊಂದಿಗೆ ಲೈಟರಗಳನ್ನು ಸಹ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಉಧ್ಘಾಟಿಸಿ ಮಾತನಾಡಿ ಉಜ್ವಲ ಯೋಜನೆ ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆ ಯೋಜನೆಯಾಗಿದ್ದು ಈ ಯೋಜನೆಯಡಿ ಉಚಿತವಾಗಿ ಗ್ಯಾಸ್ ಕಿಟ್ ವಿತರಿಸಲಾಗುತ್ತಿದೆ. ಈ ಯೋಜನೆಯ ಫಲವನ್ನು ಕಡು ಬಡವರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಳಕು ಟ್ರಸ್ಟ್ ನ ಸಿಬ್ಬಂದಿಗಳು ಕಾಯಾ ವಾಚಾ ಮನಸಾ ಶ್ರಮಿಸುತ್ತಿದ್ದು ಫಲಾನುಭವಿಗಳು ಹಣ ಸಮಯ ವ್ಯಯಿಸದೆ ಯೋಜನೆಯ ಅನೂಕೂಲತೆ ಪಡೆದುಕೊಳ್ಳುವಂತಾಗಿದೆ. ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ಕಾಳಜಿಯಿಂದ ಈ ಯೋಜನೆ ಜಾರಿಯಾಗಿದ್ದು ಹೊಗೆ ಮುಕ್ತ ಮನೆ ನಿರ್ಮಿಸುವ ಉದ್ದೇಶ ಹೊಂದಿದೆ. ಅಂತೆಯೆ ಇದೀಗ ಕೇಂದ್ರ ಸರಕಾರವು ಇದುವರೆಗೂ ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳಿಗೆ ಹಾಗೂ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕತ್ತಲು ಮುಕ್ತ ಮನೆ ನಿರ್ಮಿಸುನ ನೂತನ ಯೋಜನೆಯನ್ನು ಘೋಷಿಸಿದೆ. ಇಂತಹ ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ದಿನಕರ ಶೆಟ್ಟಿ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆ ಅವರ ಜನಪರ ಕಾಳಜಿಯ ಬಗ್ಗೆ ಮಚ್ಚುಗೆ ವ್ಯಕ್ತಪಡಿಸುತ್ತ ಇದೇ ಕಾರ್ಯಕ್ರಮ ಬೇರೆ ಪಕ್ಷದಿಂದ ನಡೆದಲ್ಲಿ ಜನರಿಂದ ಹಣ ವಸೂತಿಯಾಗುತ್ತಿತ್ತು. ಆದರೆ ಇಲ್ಲಿ ಯಾವುದೇ ಖರ್ಚು ಇಲ್ಲದೇ ಸುಲಭವಾಗಿ ಉಚಿತವಾಗಿ ಗ್ಯಾಸ್ ಕಿಟ್ ಪಡೆದುಕೊಳ್ಳುವಂತಾಗಿದ್ದಲ್ಲದೇ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ವತಿಯಿಂದ ಉಚಿತ ಲೈಟರಗಳನ್ನು ಸಹ ವಿತರಿಸಿದ್ದು ಬಿಜೆಪಿಯ ಜನಪರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ವೆಂಕಟರಮಣ ಹೆಗಡೆ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಗಜಾನನ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ನಾಯ್ಕ ವಹಿಸಿದ್ದರು.