ಅಂಕೋಲಾ: ದೇಶ ಎಷ್ಟೇ ಅಭಿವೃದ್ಧಿಯಾಗಿ ಮುಂದುವರೆಯುತ್ತಿದ್ದರು ಸಹ ಇನ್ನೂ ಅನೇಕ ಗ್ರಾಮಗಳು ಸರಿಯಾದ ಸೂರು, ಅನ್ನ, ನೀರು ಹಾಗೂ ವಾಹನ ಸಂಪರ್ಕವಿಲ್ಲದೆ ಪರಿತಪಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಘಟನೆ ಒಂದು ವರದಿಯಾಗಿದೆ.
ಅಂಕೋಲಾ ತಾಲ್ಲೂಕಿನ ಅವರ್ಸಾದ ವರಿಲ್ ಬೇಣದಲ್ಲಿ ಗ್ರಾಮಕ್ಕೆ ರಸ್ತೆ ಇಲ್ಲದೇ ವಾಹನಗಳು ಬಾರದ ಕಾರಣ ಅನಾರೋಗ್ಯಕ್ಕೆ ಒಳಗಾಗಿದ್ದ ವೃದ್ಧರೊಬ್ಬರನ್ನು ಗ್ರಾಮಸ್ಥರೇ ಜೋಳಿಗೆ ಮೂಲಕ ಆಸ್ಪತ್ರೆಗೆ ಹೊತ್ತೊಯ್ದಿರುವ ಘಟನೆ ನಡೆದಿದೆ.
ವರಿಲ್ ಬೇಣದ ನೂರಾ ಗೌಡ ಎಂಬುವವರು ಅನಾರೋಗ್ಯಕ್ಕೆ ಒಳಗಾಗಿ ಓಡಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಆದರೆ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಸ್ಥರೇ ಕುರ್ಚಿಯೊಂದನ್ನು ಜೋಳಿಗೆಯಾಗಿ ಮಾಡಿಕೊಂಡು ಸುಮಾರು 5 ಕಿ.ಮೀ. ಕಾಲ್ನಡಿಗೆಯಲ್ಲಿ ಹೊತ್ತೊಯ್ದಿದ್ದಾರೆ. ಬಳಿಕ ವಾಹನಕ್ಕೆ ಸ್ಥಳಾಂತರಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ವೃದ್ಧ ನೂರಾ ಆರೋಗ್ಯವಾಗಿದ್ದಾರೆ.
ಅವರ್ಸಾದಿಂದ 5 ಕಿ.ಮೀ ದೂರದಲ್ಲಿರುವ ವರಿಲ್ ಬೇಣಕ್ಕೆ 3 ಕಿ.ಮೀ. ರಸ್ತೆಯೇ ಇಲ್ಲ. ಇಲ್ಲಿನ ಜನರು ಕಾಡಿನ ಮಧ್ಯೆಯೇ ಕಾಲು ಹಾದಿಯಲ್ಲಿ ನಡೆದುಕೊಂಡು ತೆರಳಬೇಕಿದೆ. ಈ ಭಾಗದಲ್ಲಿ ಸುಮಾರು 8 ಮನೆಗಳಿದ್ದು, ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಇಲ್ಲಿ ರಸ್ತೆಯಾಗಿಲ್ಲ. ಜನಪ್ರತಿನಿಧಿಗಳು ಗ್ರಾಮಸ್ಥರ ಸಂಕಷ್ಟವನ್ನ ಅರಿತು ಗ್ರಾಮಕ್ಕೆ ರಸ್ತೆ ಮಾಡಿಕೊಡಬೇಕು ಎಂದು ಗ್ರಾಮದ ಗುರು ಗೌಡ ಮನವಿ ಮಾಡಿದ್ದಾರೆ.