ಐಶ್ವರ್ಯಾ ರೈ ಬಚ್ಚನ್ ಭಾರತೀಯ ಸಿನಿಮಾರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರು. ಮಾಜಿ ವಿಶ್ವ ಸುಂದರಿ ಹೆಸರಲ್ಲಿ ವಂಚನೆ ಮಾಡುತ್ತಿದ್ದ 3 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಐಶ್ವರ್ಯಾ ರೈ ಹೆಸರಲ್ಲಿದ್ದ ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಮೂವರು ವಿದೇಶಿಯರನ್ನು ಪೊಲೀಸರು ವಶಪಡಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ವರದಿ ಪ್ರಕಾರ ವಂಚಕರು ಬರೋಬ್ಬರಿ 1.80 ಕೋಟಿ ರೂಪಾಯಿ ವಂಚಿಸಿದ್ದಾರೆ ಎನ್ನಲಾಗಿದೆ. ಈ ಗ್ಯಾಂಗ್ ಮ್ಯಾಟ್ರಿಮೋನಿಯಲ್ ಸೈಟ್, ಡೇಟಿಂಗ್ ಆಯಪ್ ಮೂಲಕ ಜನರನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.
ಐಶ್ವರ್ಯಾ ರೈ ಹೆಸರಿನಲ್ಲಿದ್ದ ನಕಲಿ ಪಾಸ್‌ಪೋರ್ಟ್ ಅನ್ನು ಪತ್ತೆ ಹಚ್ಚಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಬರ್ತ್ ಪ್ಲೇಸ್ ಜಾಗದಲ್ಲಿ ಗುಜರಾತ್‌ನ ಭಾವಾನಗರ ಎಂದು ಬರೆಯಲಾಗಿದೆ. ಆರೋಪಿಗಳಿಂದ ಪೊಲೀಸರು 2.59 ಲಕ್ಷ ನಗದು ಮತ್ತು 11 ಕೋಟಿ ಮೌಲ್ಯದ ನಕಲಿ ಕರೆನ್ಸ್ ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಈ ಗ್ಯಾಂಗ್ ಬಗ್ಗೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ. ಇದುವರೆಗೆ ಎಷ್ಟು ಪ್ರಸಿದ್ಧ ವ್ಯಕ್ತಿಗಳ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದೆ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಸ್‌ಪೋರ್ಟ್ ದಂಧೆ ಮಾತ್ರವಲ್ಲದೇ ಔಷಧಿಗಳ ವಿಚಾದಲ್ಲೂ ವಂಚಿಸಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಧಿಕಾರಿ, ಗ್ರೇಟರ್ ನೋಯ್ಡಾದಲ್ಲಿ ಮೂವರು ವಿದೇಶಿಯರನ್ನು ಸೈಬರ್ ವಂಚನೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಅವರ ಬಳಿ ನಕಲಿ ಪಾಸ್‌ಪೋರ್ಟ್ ಇರುವುದು ಕಂಡುಬಂದಿದೆ. ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರಿನಲ್ಲಿ ನಿರ್ಮಿಸಲಾಗಿದೆ’ ಎಂದು ಹೇಳಿದ್ದಾರೆ.
ಅಂದಹಾಗೆ ಐಶ್ವರ್ಯಾ ರೈ ಹೆಸರಲ್ಲಿ ನಕಲಿ ಪಾಸ್‌ಪೋರ್ಟ್ ಪತ್ತೆಯಾಗಿರುವುದು ಇದೇ ಮೊದಲಲ್ಲ. 2012ರಲ್ಲಿ ಗುಜರಾತ್ ನಲ್ಲಿ ನಕಲಿ ಪಾಸ್‌ಪೋರ್ಟ್ ಪತ್ತೆಯಾಗಿತ್ತು. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಪಾಸ್‌ಪೋರ್ಟ್ ಫೋಟೊಕಾಪಿಯಲ್ಲಿ ಐಶ್ವರ್ಯಾ ರೈ ಅವರ ಭಾವಚಿತ್ರ, ಪೂರ್ಣ ಹೆಸರು, ಜನ್ಮ ದಿನಾಂಕ, ಜನ್ಮಸ್ಥಳ ಮತ್ತು ಪಾಸ್‌ಪೋರ್ಟ್ ಸಂಖ್ಯೆಯನ್ನು ತೋರಿಸಲಾಗಿದೆ. ಜನ್ಮಸ್ಥಳದ ಅಂಕಣದಲ್ಲಿ ಮಂಗಳೂರು, ಕರ್ನಾಟಕ. ಪಾಸ್‌ಪೋರ್ಟ್ ಅನ್ನು ಮೇ 2, 2006 ರಂದು ನವೀಕರಿಸಲಾಗಿದೆ ಎಂದು ಫೋಟೋಕಾಪಿ ತೋರಿಸಲಾಗಿತ್ತು.