ಮೈಸೂರು: ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಹೆಗ್ಗಳಿಕೆಯ ‘ಬಲರಾಮ’ ಆನೆಗೆ ಗುರುವಾರ ರಾತ್ರಿ ಗುಂಡು ಹಾರಿಸಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಡಿಸೆಂಬರ್ 15ರಂದು ಆನೆ ಬಲರಾಮ ಹೋಗಿದ್ದು, ಇದರಿಂದ ಸಿಟ್ಟಿಗೆದ್ದ ಜಮೀನು ಮಾಲೀಕ ಸುರೇಶ ಎಂಬಾತ ಆನೆಗೆ ಗುಂಡು ಹಾರಿಸಿದ್ದ. ಈ ಗುಂಡು ಆನೆಯ ತೊಡೆ, ಕಾಲಿನ ಭಾಗಕ್ಕೆ ಹೊಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಡಾ. ರಮೇಶ ಸೂಕ್ತ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದೆ.
ಸುರೇಶನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಆತನಿಂದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆನೆ ಬಲರಾಮ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆ ಹೊಂದಿದೆ. 1987ರಲ್ಲಿ ಕೊಡಗು ಪ್ರದೇಶದ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಇದನ್ನು ಸೆರೆಹಿಡಿಯಲಾಗಿತ್ತು. ಈಗ 64 ವರ್ಷ ವಯಸ್ಸಿನ ಬಲರಾಮ 8 ಅಡಿ 10 ಇಂಚು ಎತ್ತರವಿದ್ದು, 4535 ಕೆಜಿ ತೂಕವಿದೆ.