ಹೊನ್ನಾವರ : ತಾಲೂಕಿನಲ್ಲಿ ಕಳ್ಳರ ಹಾವಳಿ ವಿಪರೀತವಾಗುತ್ತಿದ್ದು, ಚಿನ್ನಾಭರಣಗಳ ದರೋಡೆ ಪ್ರಕರಣಗಳು ವರದಿಯಾಗಿದ್ದು ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ತಾಲೂಕಿನ ಚಂದಾವರ ಹನುಮಂತ ದೇವಸ್ಥಾನದ ಬಳಿ ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ಅಪರಿಚಿತ ವ್ಯಕ್ತಿ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಹೊನ್ನಾವರದ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಸರ ಕಳೆದುಕೊಂಡವರು ಎಂದು ತಿಳಿದುಬಂದಿದೆ. ಇವರು ಸಂಬಂಧಿಕರ ಮದುವೆಗೆಂದು ಚಂದಾವರಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಮಹಿಳೆಯೊಬ್ಬಳು ಮದುವೆ ಮುಗಿಸಿ ವಾಪಸ್ಸಾಗಲು ಟೆಂಪೋಗೆ ಕಾಯುತ್ತಿದ್ದ ವೇಳೆ ಏಕಾಏಕಿ ಅಪರಿಚಿತ ನಡೆದು ಬಂದು ಏಕಾಏಕಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾನೆ. ಮಾಂಗಲ್ಯ ಮಾತ್ರವಲ್ಲದೆ ಚೈನ್ ಗೂ ಕೈಹಾಕಿದ್ದು, ಆದರೆ ಚೈನ್ ತುಂಡಾಗಿ ನೆಲಕ್ಕೆ ಬಿದ್ದಿದ್ದರಿಂದ ಅದನ್ನು ಎತ್ತಿಕೊಳ್ಳಲು ಹೆದರಿ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಮಹಿಳೆ ಕಂಗಾಲಾಗಿದ್ದಾರೆ.