ಕಾರವಾರ: ಕಾಂಗ್ರೆಸ್ ಕಾಲದಲ್ಲಿ ಕೇವಲ ಬಾಂಬ್ ತಯಾರಕ ಕಾರ್ಖಾನೆಗಳು ಮಾತ್ರ ಸ್ಥಾಪನೆಯಾದವು. ಕೇವಲ ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಭಟ್ಕಳದ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶ ಒಡೆಯುವಂತಹ, ದೇಶ ವಿರೋಧಿ, ಭ್ರಷ್ಟರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬೆಂಬಲ ಕೊಡ್ತಾರೆ. ಅಂದಮೇಲೆ ಕಾಂಗ್ರೆಸ್ ಅದೊಂದು ಭಯೋತ್ಪಾಕರ ಪಾರ್ಟಿ, ಉಗ್ರನ ಎನ್ ಕೌಂಟರ್ ಮಾಡಿದಾಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರೊಬ್ಬರು ಕಣ್ಣೀರು ಹಾಕ್ತಾರೆ. ಸೈನಿಕರು ಸತ್ತಾಗ ಇವರು ಕಣ್ಣೀರು ಹಾಕುವುದಿಲ್ಲ. ಭ್ರಷ್ಟಾಚಾರಕ್ಕೆ ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದು ಕಾಂಗ್ರೆಸ್. ಮೋದಿ ಬಂದ ಮೇಲೆ ಭ್ರಷ್ಟಾಚಾರ ಇಲ್ಲವಾಗಿದೆ. ಡಿಕೆಶಿ ರೌಡಿಸಂ ರಾಜಕಾರಣ ಬಿಟ್ಟು ಭಯೋತ್ಪಾದಕ ರಾಜಕಾರಣ ಪ್ರಾರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಭೆಯಲ್ಲಿ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ರೂಪಾಲಿ ನಾಯ್ಕ, ದಿನಕರಶೆಟ್ಟಿ, ಸುನೀಲ್ ನಾಯ್ಕ, ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆಯಾಗಲಿದ್ದು, ಚುನಾವಣಾ ಪೂರ್ವದ ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.