ಕುಮಟಾ: ಶೈಕ್ಷಣಿಕ ವರ್ಷದ ಮುಕ್ಕಾಲು ಭಾಗ ಮುಗಿದು ಕಾಲು ಭಾಗವಷ್ಟೇ ಇರುವಾಗ ಬೋಧನಾ –ಕಲಿಕಾ ಪ್ರಕ್ರಿಯೆಯು ಭರದಿಂದ ಸಾಗುತ್ತಿದ್ದ ಹೊತ್ತಿನಲ್ಲಿ ವರ್ಷದ ಹಿಂದಿನ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಆಧರಿಸಿ ಶಿಕ್ಷಕರನ್ನು ಹೆಚ್ಚುವರಿಗೊಳಿಸಲು ಮುಂದಾಗಿರುವುದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಿತಾಸಕ್ತಿಗೆ ತೀವ್ರವಾಗಿ ಬಾಧಕವಾಗಿರುವುದರಿಂದ ಈ ವರ್ಗಾವಣೆಯನ್ನು ಮುಂದೂಡಲು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು ನಗರದ ನೆಲ್ಲಿಕೇರಿಯ ಬಸ್ ನಿಲ್ದಾಣದ ಸಮೀಪದಲ್ಲಿನ ಹೋಟೆಲ್ ಅನುಪಮಾದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘವು ಬಾಧಿತ ಶಿಕ್ಷಕರಿಗಾಗಿ ಆಯೋಜಿಸಿದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ದಿನಾಂಕ:31/12/2021 ರ ಸರಿಸುಮಾರು ಒಂದು ವರ್ಷದ ಹಿಂದಿನ ವಿದ್ಯಾರ್ಥಿಗಳ ಅಂಕೆ-ಸಂಖ್ಯೆಗಳನ್ನು ಆಧರಿಸಿ ಈಗ ಶಿಕ್ಷಕರ ಹೆಚ್ಚುವರಿ ವರ್ಗಾವಣೆಗೊಳಿಸಲು ಮುಂದಾಗಿರುವುದು ಸರಿಯಲ್ಲ. ವರ್ಷದ ಹಿಂದೆ ಶಾಲೆಗಳಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆಗೂ ಈಗಿನ ಸಂಖ್ಯೆಗೂ ವ್ಯತ್ಯಾಸವಿದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಹೆಚ್ಚು- ಕಡಿಮೆಯಾಗಿದೆ. ವರ್ಷದ ಹಿಂದೆ ಒಂದು ಶಾಲೆಗೆ ಶಿಕ್ಷಕರು ಹೆಚ್ಚಾಗಿದ್ದರೂ ,ಇಂದು ಅದೇ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿ ಶಿಕ್ಷಕರು ಬೇಕಾಗಿರಬಹುದು.ಶಿಕ್ಷಕರನ್ನು ಈಗಿರುವ ಮಕ್ಕಳ ಸಂಖ್ಯೆಗಳನ್ನು ಆಧರಿಸಿ ಬೇಕು-ಬೇಡವೆಂದು ತೀರ್ಮಾನಿಸಿ ಹೆಚ್ಚುವರಿ ವರ್ಗಾವಣಾ ಪ್ರಕ್ರಿಯೆಯನ್ನು ಕೈಗೊಳ್ಳುವುದು ನ್ಯಾಯಯುತವೆನಿಸುತ್ತದೆ. ವರ್ಷದ ಹಿಂದಿನ ಅವಧಿಯಲ್ಲಿ ಶಿಕ್ಷಕರು ಹೆಚ್ಚುವರಿಯಾಗಿದ್ದಲ್ಲಿ ಆಗಲೇ ಹೆಚ್ಚುವರಿ ವರ್ಗಾವಣೆ ಮಾಡಬೇಕಿತ್ತೇ ಹೊರತು ಈಗ ಹಿಂದಿನ ಸಂಖ್ಯೆಯನ್ನು ಆಧರಿಸಿ ವರ್ಗಾಯಿಸುವುದು ಸೂಕ್ತವಲ್ಲ.ಅಲ್ಲದೇ ಕೋವಿಡ್ 19ರ ಕಾರಣಕ್ಕೆ ರಾಜ್ಯದ ಶೈಕ್ಷಣಿಕ ಸ್ಥಿತಿಯು ಇನ್ನೂ ಸಮತೋಲನಕ್ಕೆ ಬಂದಿಲ್ಲವಾಗಿದ್ದು, ಕಲಿಕಾ ಚೇತರಿಕೆ ಹೆಸರಿನಲ್ಲಿ ಇಡೀ ವರ್ಷಕ್ಕೆ ರೂಪಿಸಿಕೊಳ್ಳಲಾದ ಶೈಕ್ಷಣಿಕ ಕ್ರಿಯಾ ಯೋಜನೆಯು ಪರಿಪೂರ್ಣವಾಗಿ ಅನುಷ್ಠಾನಗೊಳ್ಳಲು ಈಗ ಶಿಕ್ಷಕರನ್ನು ಹೆಚ್ಚುವರಿಯಾಗಿ ವರ್ಗಾಯಿಸಿದ್ದಲ್ಲಿ ಅಡಚಣೆಯಾಗಿ ಶೈಕ್ಷಣಿಕ ಪ್ರಗತಿಗೆ ಬಾಧಕವಾಗುತ್ತದೆ.

ಜೊತೆಗೆ ದಿನಾಂಕ:31/12/2021ರ ನಂತರದಲ್ಲಿಯೇ ಶಾಲೆಗೆ ಶಿಕ್ಷಕರ ಅಗತ್ಯವಿದೆಯೆಂದು ವರ್ಗಾವಣೆಯ ಮೇರೆಗೆ ಆ ಶಾಲೆಗಳನ್ನು ಆಯ್ದುಕೊಳ್ಳಲು ಅವಕಾಶಗಳನ್ನು ಕಲ್ಪಿಸಿ, ಸ್ಥಳ ನಿಯುಕ್ತಿಗೊಂಡ ಆರೇಳು ತಿಂಗಳಲ್ಲಿಯೇ ವರ್ಗಾವಣೆಗೊಂಡು ಬಂದ ಅದೇ ಶಿಕ್ಷಕರನ್ನು ಇಲ್ಲವೇ ಆ ಶಾಲೆಯಲ್ಲಿನ ಅನ್ಯ ಶಿಕ್ಷಕರನ್ನು ಹೆಚ್ಚುವರಿಯೆಂದು ಪರಿಗಣಿಸಿ ವರ್ಗಾವಣೆಗೊಳಿಸಲು ಮುಂದಾದ ಉದಾಹರಣೆಗಳಿದ್ದು ,ಈಗ ಶಿಕ್ಷರನ್ನು ಹೆಚ್ಚುವರಿ ಗೊಳಿಸುವುದಿದ್ದಲ್ಲಿ ಆಗ ಖಾಲಿ ಹುದ್ದೆಯೆಂದು ವರ್ಗಾವಣೆಯಲ್ಲಿ ತೋರಿಸುವ ಅಗತ್ಯವಿರಲಿಲ್ಲವೆಂದಿರುತ್ತಾರೆ.

RELATED ARTICLES  ROBBERY : ಕಾರನ್ನು ಅಡ್ಡಗಟ್ಟಿ 50 ಲಕ್ಷ ದರೋಡೆ

2023ರ ಜನವರಿಯಿಂದ ಮಾರ್ಚ ಮಾಹೆಯವರೆಗೆ ನಿವೃತ್ತಿಯಾಗಲಿರುವ ಶಿಕ್ಷಕರ ಸಂಖ್ಯೆಯು ಸಾಕಷ್ಟು ಪ್ರಮಾಣದಲ್ಲಿದ್ದು, ಈಗ ಶಿಕ್ಷಕರನ್ನು ಹೆಚ್ಚುವರಿಯೆಂದು ವರ್ಗಾವಣೆಗೊಳಿಸಿದಲ್ಲಿ ನಿವೃತ್ತಿಯಿಂದ ತೆರವಾದ ಹುದ್ದೆಗಳಿಗೆ ಶಿಕ್ಷಕರಿಲ್ಲದೇ ಶಾಲೆಗಳಲ್ಲಿ ಬೋಧನಾ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 11ಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ ಎರಡು ಶಿಕ್ಷಕರಿರಲು ಅವಕಾಶವನ್ನು ಕಲ್ಪಿಸಲಾಗಿದ್ದು ,11 ಇಲ್ಲವೇ 11 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿಯೂ ಒಂದರಿಂದ 5 ನೇ ತರಗತಿಯವರೆಗೆ ಒಟ್ಟು 20 ವಿಷಯಗಳನ್ನು ಒಬ್ಬರೇ ಶಿಕ್ಷಕರು ಬೋಧಿಸಲು ಸಾಧ್ಯವೇ? ಎಂಬುದರ ಕುರಿತು ಪ್ರಾಯೋಗಿಕವಾಗಿ ಪರಾಮರ್ಶಿಸದೇ ಹೆಚ್ಚುವರಿ ವರ್ಗಾವಣೆಗೆ ಮುಂದಾಗಿದ್ದು ಸಾಧುವಲ್ಲ.

ಮುಖ್ಯಾಧ್ಯಾಪಕರ ಹುದ್ದೆಯ ಸೃಷ್ಟಿಯ ಸಂದರ್ಭದಲ್ಲಿ ಇರುವ ಶಿಕ್ಷಕರನ್ನು ಹೆಚ್ಚುವರಿಗೊಳಿಸಿದ ಹಿಂದಿನ ಗೊಂದಲವನ್ನು ಸರಿಪಡಿಸಿರುವುದಿಲ್ಲ.ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ವಿಷಯವಾರು ಶಿಕ್ಷಕರ ಅಗತ್ಯವಿದ್ದರೂ ತರಗತಿವಾರಾದರು ಶಿಕ್ಷಕರಿರುವಂತೆ ನೋಡಿಕೊಳ್ಳದೆ ಶಿಕ್ಷಕರನ್ನು ಹೆಚ್ಚುವರಿಗೊಳಿಸುತ್ತಿರುವುದು ಸರಿಯಲ್ಲ. ಹೆಚ್ಚುವರಿಯಾದ ಶಿಕ್ಷಕರು ತಾಲೂಕಿನಲ್ಲಿ ಸ್ಥಳ ಆಯ್ಕೆಮಾಡಿಕೊಳ್ಳಲು ಈಗ ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲ.ಅರ್ಹ ಶಿಕ್ಷಕರಿಗೆ ಮುಖ್ಯಾಧ್ಯಾಪಕರ ಹುದ್ದೆಗೆ,ಪದವೀಧರ ಶಿಕ್ಷಕರ ಹುದ್ದೆಗೆ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಭಡ್ತಿಯನ್ನು ನೀಡಿದ ಬಳಿಕ ಹಾಗೂ 2023ರ ಜೂನ್-ಜುಲೈ ಮಾಹೆಯವರೆಗೆ ನಿವೃತ್ತಿಗೊಂಡು ತೆರವಾಗಲಿರುವ ಹುದ್ದೆಯನ್ನು ಆಯ್ದುಕೊಳ್ಳುವಂತೆ 2023ರ ಜೂನ್-ಜುಲೈ ಮಾಹೆಯ ವಿದ್ಯಾರ್ಥಿಗಳ ದಾಖಲಾತಿಯನ್ನು ಆಧರಿಸಿ 2023ರ ಅಕ್ಟೋಬರ್ ಮಾಹೆಗೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಮುಂದೂಡುವಂತೆ ಸರ್ಕಾರವು ಕ್ರಮ ಕೈಗೊಳ್ಳ ಬೇಕಿದೆ ಎಂದು ಅವರು ಹೇಳಿದರು.

RELATED ARTICLES  ಹೆಗಡೆಕಟ್ಟಾದಲ್ಲಿ ಡಿಜಿಟಲ್ ಮತ್ತು ಯೋಗಕ್ಲಾಸ್ ಉದ್ಘಾಟನೆ

ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಸಂಚಾಲಕರಾದ -ವಿಜಯ ಕುಮಾರ ನಾಯ್ಕರವರು ಮಾತನಾಡಿ- ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನೀಡಲಾದ ವಿನಾಯತಿಯಲ್ಲಿ ಪತಿ-ಪತ್ನಿ ಪ್ರಕರಣವನ್ನು ಪರಿಗಣಿಸಬೇಕಾದುದು ಸಾಮಾಜಿಕ ನ್ಯಾಯ ತತ್ವದ ಅಡಿಯಲ್ಲಿ ತೀರಾ ಅವಶ್ಯಕವಾಗಿದೆ ಎಂದರು.ಸದ್ಯದಲ್ಲಿಯೇ ನಿವೃತ್ತಿಗೊಳ್ಳುವ ಶಿಕ್ಷಕರಿರುವ ಶಾಲೆಯಲ್ಲಿನ ಶಿಕ್ಷಕರನ್ನು ಹೆಚ್ಚುವರಿ ವರ್ಗಾವಣೆಗೆ ಪರಿಗಣಿಸುವುದರಿಂದ ಇನ್ನೂ ಎರಡು ಮೂರು ತಿಂಗಳಲ್ಲಿಯೆ ಆ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗುವುದರಿಂದ ಅಂತಹ ಶಾಲೆಗಳಲ್ಲಿನ ಶಿಕ್ಷಕರನ್ನು ಈಗಿನ ಹೆಚ್ಚುವರಿ ಪಟ್ಟಿಯಿಂದ ಕೈ ಬಿಡುವುದು ಸೂಕ್ತವಾಗಿರುತ್ತದೆ ಎಂದು ಹೇಳಿದರು.


ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ನಾಯಕ ಬೇಲಿಕೇರಿಯವರು ಹಿಂದೆ ಪ್ರಾಥಮಿಕ ಶಾಲೆಗಳಲ್ಲಿ ವಿಷಯ ಶಿಕ್ಷಕರೆಂದು ನೇಮಕಾತಿಗೊಳಿಸದೇ ಎಲ್ಲರನ್ನೂ ಸಾಮಾನ್ಯ ಶಿಕ್ಷಕರೆಂದು ನೇಮಕಾತಿಗೊಳಿಸುತ್ತಿದ್ದು, ಇತ್ತೀಚಿಗೆ ವಿಷಯ ಶಿಕ್ಷಕರೆಂದು ಪ್ರತ್ಯೇಕವಾಗಿ ನೇಮಕಾತಿಗೊಳಿಸುತ್ತಿದ್ದು,ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಹಿಂದಿನ ಸಾಮಾನ್ಯ ಶಿಕ್ಷಕರನ್ನು ವಿಷಯ ಶಿಕ್ಷಕರೆಂದು ಮಾರ್ಪಾಡಿಸುವ ಕ್ರಮವನ್ನು ಅನುಸರಿಸದೇ ಹೆಚ್ಚುವರಿಗೊಳಿಸುತ್ತಿರುವುದರಿಂದ ತೀರಾ ಅನ್ಯಾಯವಾಗುತ್ತಿದ್ದು,ಅರ್ಹ ಶಿಕ್ಷಕರನ್ನು ವಿಷಯ ಶಿಕ್ಷಕರೆಂದು ಮಾರ್ಪಡಿಸಿ, ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಮುಂದೂಡಲು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಈಗಾಗಲೇ ಮನವಿಯನ್ನು ಸಲ್ಲಿಸಿದ್ದೇವೆಂದು,ಅವರು ಮಾನ್ಯ ಶಿಕ್ಷಣ ಸಚಿವರೊಂದಿಗೆ ಸಮಾಲೋಚಿಸಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಮುಂದೂಡಲು ಭರವಸೆಯನ್ನು ನೀಡಿರುತ್ತಾರೆ ಎಂದರು.


ಸಭೆಯಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಶಿವಚಂದ್ರ,ಸಂಘಟನಾ ಕಾರ್ಯದರ್ಶಿ ಬಾಲಚಂದ್ರ ಗಾಂವಕರ,ಲಾII ಗಣಪತಿ ನಾಯಕ ಶೀಳ್ಯ , ಈಶ್ವರ ಕುಬಾಲ , ವಿಷ್ಣು ಮಡಿವಾಳ, ರಾಜೇಶ ಶೇಟ್,ಪರಮೇಶ್ವರ ನಾಯ್ಕ ,ಮಧುಕರ ನಾಯಕ,ಭಾರತಿ ಶೆಟ್ಟಿ, ಮಾಲಾಬಾಯಿ ನಾಯ್ಕ, ಜಯಾ ನಾಯ್ಕ, ಬಾಬಿ ನಾಯ್ಕ, ಗೋಪಾಲ ಕೃಷ್ಣ ಪುರಾಣಿಕ , ಜಿ.ಎಸ್.ಹೆಗಡೆ,ಬಲರಾಮ ಪಟಗಾರ ಹಾಗೂ ಪ್ರಾಚಾರ್ಯ ಎಸ್.ಜಿ.ಭಟ್ ಮೊದಲಾದವರಿದ್ದರು.