ಶಿರಸಿ : ಹಸುಗೂಸನ್ನು ಎಲ್ಲೆಂದರಲ್ಲಿ ಬಿಟ್ಟುಹೋಗುವ ಕನಿಕರವಿಲ್ಲದ ಮನಸ್ಥಿತಿಗೆ ಜನ ತಲುಪುತ್ತಿರುವುದು ತುಂಬಾ ವಿಷಾದದ ಸಂಗತಿ. ಮಗುವನ್ನು ಚಪ್ಪಲಿ ಬಾಕ್ಸ್ ನಲ್ಲಿ ತುಂಬಿಟ್ಟು ರಸ್ತೆಯಲ್ಲಿ ಬಿಟ್ಟಿದ್ದ ಸುದ್ದಿ ಹಸಿಯಾಗಿ ಇರುವಾಗಲೇ ಮೂರು ತಿಂಗಳ ಹಸುಗೂಸೊಂದನ್ನು ಬಾಲಕರ ಬಾಲಮಂದಿರ ಆವರಣದಲ್ಲಿ ಬಿಟ್ಟುಹೋದ ಘಟನೆ ವರದಿಯಾಗಿದೆ.
ಮಗುವು ಅಂಗವೈಕಲ್ಯವನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಪೋಷಕರು ಬಿಟ್ಟುಹೋಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸ್ಥಳದಲ್ಲಿ ಕ್ಷಮೆಯಾಚನೆ ಪತ್ರವೊಂದು ಸಿಕ್ಕಿದ್ದು, ಇದರಲ್ಲಿ ಮಗುವಿನ ಹುಟ್ಟಿದ ದಿನಾಂಕ ಮತ್ತು ಸಮಯವನ್ನು ಬರೆದಿದ್ದಾರೆ. ಮಗು ಅಂಗವೈಕಲ್ಯವನ್ನು ಹೊಂದಿದ್ದು, ಹೆಚ್ಚಿನ ಚಿಕಿತ್ಸೆ ಬೇಕಿದೆ. ಆದರೆ, ನಾವು ಆರ್ಥಿಕವಾಗಿ ದುರ್ಬಲವಾಗಿರುವುದರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಒಪ್ಪಿಸುತ್ತಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಘಟನೆ ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ನಡೆದಿದ್ದು, ಮಗು ಅಳುವ ಧ್ವನಿ ಕೇಳಿದ ಬಾಲಮಂದಿರದ ಮೇಲ್ವಿಚಾರಕರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಆವರಣದಲ್ಲಿ ಬಿಟ್ಟು ತೆರಳಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ – ಕೊತ ಕೊತ ಕುದಿವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆದು ಭಕ್ತಿ ಮೆರೆದ ಮಾಲಾಧಾರಿಗಳು.
ವಿಷಯ ತಿಳಿದ ತಕ್ಷಣ ಮಕ್ಕಳ ಸುರಕ್ಷಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಮಕ್ಕಳ ಸುರಕ್ಷಾ ಕಮಿಟಿ ಅಧ್ಯಕ್ಷೆ ಅನಿತಾ ಪರ್ವತೆಕರ್ ಮತ್ತು ಸದಸ್ಯೆ ಅಂಜನಾ ಭಟ್ಟ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರದೊಳಗೆ ಕರೆದೊಯ್ದಿದ್ದಾರೆ. ಆರೋಗ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.