ಯಲ್ಲಾಪುರ : ಎನ್. ಎಸ್. ಹೆಗಡೆ ಕುಂದರಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿ, ಯಲ್ಲಾಪುರ ತಾಲೂಕಿನ ಭರತನಹಳ್ಳಿಯಲ್ಲಿ ಪ್ರಗತಿ ವಿದ್ಯಾಲಯ, ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ವಿದ್ಯಾಲಯಗಳನ್ನು ಸ್ಥಾಪಿಸಿ, ಮುನ್ನಡೆಸಿದ ಶಿಕ್ಷಣ ಪ್ರೇಮಿ. 87ರ ಇಳಿ ವಯಸ್ಸಿನಲ್ಲಿಯೂ ಸದಾ ಉತ್ಸಾಹಶೀಲ ವ್ಯಕ್ತಿಯಾಗಿರುವ ಅವರು, ಶಿರಸಿಯ ಟಿ. ಎಸ್. ಎಸ್., ಯಲ್ಲಾಪುರ ಎ. ಪಿ. ಎಂ. ಸಿ., ಸ್ವರ್ಣವಲ್ಲಿ ಮಹಾ ಸಂಸ್ಥಾನ ಹೀಗೆ ಹಲವಾರು ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದವರು ಅವರು ಗುರುವಾರ ನಿಧನರಾಗಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಸಹಕಾರಿಗಳಾದ ಎನ್.ಎಸ್.ಹೆಗಡೆ ಕುಂದರಗಿಯವರ ಮನೆಗೆ ತೆರಳಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಎನ್.ಎಸ್.ಹೆಗಡೆಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಎನ್.ಎಸ್.ಹೆಗಡೆ ಅವರು ಶಿಕ್ಷಣ ಕ್ಷೇತ್ರ, ಸಹಕಾರಿ, ಧಾರ್ಮಿಕ ಕ್ಷೇತ್ರ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ತಮ್ಮದೆ ಆದ ಸೇವೆಯನ್ನು ನೀಡಿದವರು. ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಜಿಲ್ಲೆಯ ರೈತರ ಕಷ್ಟಗಳಿಗೆ ಹೆಗಲಾದ ಇವರ ನಿಧನದಿಂದ ಸಮಾಜಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ ಎಂದರು.