ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ವಿದೇಶಕ್ಕೆ ಭೇಟಿ ನೀಡಿದಾಗ ತಮ್ಮ ವಿರುದ್ಧದ ಏರ್ಸೆಲ್-ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ಸಿಬಿಐ ಬುಧವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕಾರ್ತಿ ಚಿದಂಬರಂ ವಿರುದ್ಧದ ಲುಕ್ ಔಟ್ ನೋಟಿಸ್ ಗೆ ಮದ್ರಾಸ್ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಆರೋಪಿಗೆ ಸಾಕ್ಷ್ಯಗಳನ್ನು ತಿರುಚುವ ಸಾಮರ್ಥ್ಯ ಇದ್ದು, ಕಳೆದ ಮೇ, ಜೂನ್ ಮತ್ತು ಜುಲೈನಲ್ಲಿ ವಿದೇಶಕ್ಕೆ ಭೇಟಿ ನೀಡಿದ್ದಾಗ ಕಾರ್ತಿ ಅದನ್ನು ಮಾಡಿದ್ದಾರೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಆರೋಪಿಸಿದೆ.
ಸಾಕ್ಷ್ಯಗಳನ್ನು ತಿರುಚುವ ಸಾಮರ್ಥ್ಯ ಕಾರ್ತಿಗೆ ಇದೆ ಎಂಬುದನ್ನು ನಾನು ತೋರಿಸುತ್ತೇನೆ. ಕಳೆದ ಮೇ 13ರಿಂದ 18ರವರೆಗೆ ಮತ್ತು ಜೂನ್ ಹಾಗೂ ಜುಲೈ ಎರಡನೇ ವಾರದಲ್ಲಿ ಅವರು ವಿದೇಶಕ್ಕೆ ಭೇಟಿ ನೀಡಿದ್ದಾಗ ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂಬುದು ಸಮಕಾಲೀನ ಅಧಿಕೃತ ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಸಿಬಿಐ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂ ಪೀಠಕ್ಕೆ ತಿಳಿಸಿದ್ದಾರೆ.
ಕಾರ್ತಿ ಚಿದಂಬರಂ ಅವರು ವಿದೇಶ ಪ್ರವಾಸದ ವೇಳೆ ಸಾಕ್ಷ್ಯಗಳನ್ನು ತಿರುಚಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಸಿಬಿಐ ಸಮರ್ಥಿಸಿಕೊಂಡಿದೆ.
ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರಿಗೆ ಸಿಬಿಐ ಹಲವು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಕಾರ್ತಿ ವಿರುದ್ಧ ಸಿಬಿಐ ಲುಕ್ ಔಟ್ ನೋಟಿಸ್ ಸಹ ನೀಡಿದೆ.