ಶಿರಸಿ: ತಾಲೂಕಿನ ಕೊಡೆಗದ್ದೆಯ ವೇದಮೂರ್ತಿ ರಾಮಚಂದ್ರ ಗಣಪತಿ ಭಟ್ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಶ್ರೇಷ್ಠವಾದ ಕುಟುಂಬದಲ್ಲಿ ಜನಿಸಿ,ತಮ್ಮ ಹೆಸರಿಗೆ ತಕ್ಕಂತೆ ಜೀವನದ ಕೊನೆಕ್ಷಣದವರೆಗೂ ಕಟ್ಟುನಿಟ್ಟಿನ ಆದರ್ಶ ಜೀವನವನ್ನು ನಡೆಸಿದ್ದರು.
ರೇವಣಕಟ್ಟಾ ಪಾಠಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಾ ಪಾಠಶಾಲೆಯ ಏಳ್ಗೆ, ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಇಡೀ ಸಮಾಜವೇ ಕುಟುಂಬದಂತೆ ಪ್ರೀತಿಸಿ ತಮ್ಮ ನಡೆ,ನುಡಿ,ಶಿಸ್ತು, ಸಮಯಪ್ರಜ್ಞೆ ಹೀಗೆ ಹಲವಾರು ಗುಣ, ನಡತೆಗಳನ್ನು ಕರಾರುವಕ್ಕಾಗಿ ಪಾಲಿಸಿ, ಅದನ್ನು ತಮ್ಮ ವಿದ್ಯಾರ್ಥಿಗಳ ಜೀವನದಲ್ಲೂ ಪಾಲಿಸುವಂತೆ ಕಲಿಸುತ್ತಾ ನೂರಾರು ಜನರಿಗೆ ಆದರ್ಶಪ್ರಾಯರಾಗಿ ಬದುಕಿದ್ದರು.
ರೇವಣಕಟ್ಟಾ ಶ್ರೀಮಹಾಗಣಪತಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಹಲವಾರು ದೇವಸ್ಥಾನಗಳಲ್ಲಿ ನಡೆಯುವ ಅಹೋರಾತ್ರಿ ಭಜನಾ ಕಾರ್ಯಕ್ರಮಗಳಲ್ಲಿ ಮಹತ್ವದ ಪಾತ್ರವಹಿಸಿ ಕಾರ್ಯಕ್ರಮಗಳ ಯಶಸ್ಸಿಗೆ ಬೆನ್ನೆಲುಬಾಗಿ ಇರುತ್ತಿದ್ದರು.
ಇವರ ಅಗಲುವಿಕೆಯು ಕುಟುಂಬ,ಅಪಾರ ಶಿಷ್ಯವರ್ಗ,ಬಂಧು ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಶ್ರೇಷ್ಠ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ