ಅಂಕೋಲಾ : ದೇವಸ್ಥಾನದ ಪಕ್ಕದ ಹಳೆಯ ಅಂಗಡಿಯೊಂದರ ಮುಂದೆ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಪಟ್ಟಣದ ಕಣಕಣೇಶ್ವರ ದಲ್ಲಿ ಶನಿವಾರ ನಡೆದಿದೆ. ಕಣಕಣೇಶ್ವರ ದೇವಸ್ಥಾನದ ಪಕ್ಕದ ಹಳೆಯ ಅಂಗಡಿ ಮುಂಭಾಗದ ಖಾಲಿ ಜಾಗದಲ್ಲಿ ಹೆಚ್ಚಿನ ಹೊತ್ತು ಕಳೆದು ರಾತ್ರಿ ವೇಳೆ ಇಲ್ಲೇ ಮಲಗುತ್ತಿದ್ದ ಎನ್ನಲಾಗಿದ್ದ ಗಣೇಶ ರಘುವೀರ ಪ್ರಭು ಮೃತ ದುರ್ದೈವಿ ಎನ್ನಲಾಗಿದೆ.
ತಾಲೂಕಿನ ಮೂಲದವನಲ್ಲ ಎನ್ನಲಾದ ಈ ಮೃತ ದುರ್ದೈವಿ ಅದಾವುದೋ ಕಾರಣದಿಂದ ಕುಟುಂಬದಿಂದ ದೂರ ಉಳಿದಿರುವ ಸಾಧ್ಯತೆ ಕೇಳಿ ಬಂದಿದ್ದು, ಕಳೆದ ಕೆಲ ಕಾಲದಿಂದ ಅಂಕೋಲಾದಲ್ಲಿ ಬಂದು ನೆಲೆಸಿದ್ದು, ಇತ್ತೀಚಿನ ದಿನಗಳಲ್ಲಿ ಈತನಿಗೆ ಅಕ್ಕ ಪಕ್ಕದ ನಿವಾಸಿಗಳು, ದಾರಿಹೋಕರು, ಇತರರು ಆಗಾಗ ನೀರು, ಆಹಾರ ನೀಡಿ ಮಾನವೀಯತೆ ತೋರುತ್ತಿದ್ದರು.
ಸ್ಥಳೀಯ ಚಿನ್ನದ ವರ್ತಕರೊಬ್ಬರು ಮೃತನನ್ನು ಗುರುತಿಸಿ ಆತನ ಕುಟುಂಬಸ್ಥರಿಗೆ ಸುದ್ದಿ ತಲುಪಿಸಿದ್ದಾರೆ ಎನ್ನಲಾಗಿದೆ. ಶುಕ್ರವಾರವೂ ಅದೇ ಸ್ಥಳದಲ್ಲಿ ಮಲಗಿದ್ದವನು ಬೆಳಗಾಗುವ ಹೊತ್ತಿಗೆ ಶವವಾಗಿ ಪತ್ತೆಯಾಗಿದ್ದು ಶನಿವಾರದ ಸಂತೆಯ ದಿನ ಬೆಳಿಗ್ಗೆ ಅದನ್ನು ಗಮನಿಸಿದ ಸ್ಥಳೀಯರು ERSS 112 ತುರ್ತು ವಾಹನ ಸಿಬ್ಬಂದಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.