ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿ ಕಳೆದ ಕೆಲವು ದಿನಗಳಿಂದ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ತೀವ್ರ ಆತಂಕವನ್ನು ಉಂಟುಮಾಡಿದೆ. ಹಕ್ಕಿ ಜ್ವರ ಹರಡುತ್ತದೆ ಎಂಬ ಮುನ್ನೆಚ್ಚರಿಕೆಯಿಂದ ಕೇರಳದ ಕೊಟ್ಟಾಯಂ ಜಿಲ್ಲೆಯ 3 ಪ್ರತ್ಯೇಕ ಪಂಚಾಯತ್‌ಗಳಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲಾಗಿದೆ. ಕೊಟ್ಟಾಯಂ ಜಿಲ್ಲೆಯ ವೇಚೂರು, ನೀಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ 6,017 ಪಕ್ಷಿಗಳು ಅವುಗಳಲ್ಲೂ ಹೆಚ್ಚಾಗಿ ಬಾತುಕೋಳಿಗಳನ್ನು ಹತ್ಯೆ ಮಾಡಲಾಗಿದೆ.
ಈ ಬಗ್ಗೆ ಕೊಟ್ಟಾಯಂ ಜಿಲ್ಲಾಡಳಿತ ಮಾಹಿತಿ ನೀಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಪಿಟಿಐ ವರದಿ ಮಾಡಿದೆ.
ಲಕ್ಷದ್ವೀಪ ಆಡಳಿತವು ಇದೀಗ ಕೇರಳದಲ್ಲಿ ಹಕ್ಕಿಜ್ವರದ ಹರಡುವಿಕೆಯಿಂದಾಗಿ ದ್ವೀಪಗಳಿಗೆ ಕೋಳಿಯನ್ನು ಸಾಗಿಸುವುದನ್ನು ನಿಷೇಧಿಸಿದೆ. ಇಂದು ಮುಂಜಾನೆ, ರೈತರು ಕೊಳಗಳಲ್ಲಿ ಇಳಿದು ಬಾತುಕೋಳಿಗಳನ್ನು ಹಿಡಿದು ಅವುಗಳನ್ನು ಕೊಲ್ಲಲು ಗೊತ್ತುಪಡಿಸಿದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಆ ಬಾತುಕೋಳಿಗಳನ್ನು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ವರದಿಯಾಗಿತ್ತು. ಹರಿಪಾಡು ಪುರಸಭೆಯಲ್ಲಿ ರೋಗ ಹರಡುವುದನ್ನು ತಡೆಯಲು ಕಾರ್ಯಾಚರಣೆ ನಡೆಸಲಾಗಿತ್ತು. ಭಾರತದಲ್ಲಿ, ಹಕ್ಕಿ ಜ್ವರ ಮುಖ್ಯವಾಗಿ ಸೆಪ್ಟೆಂಬರ್ ಮತ್ತು ಮಾರ್ಚ್ ನಡುವಿನ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ ದೇಶಕ್ಕೆ ಬರುವ ವಲಸೆ ಹಕ್ಕಿಗಳಿಂದ ಈ ರೋಗ ಹರಡುತ್ತದೆ.
Source : TV9