ಹೊನ್ನಾವರ: ಕರ್ಣನ ವೇಷಧಾರಿಯಾಗಬೇಕು ಎಂಬ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಆಸೆ ಈಡೇರಲೇ ಇಲ್ಲ. ಆದರೆ ಅವರ ಕೊನೆ ಆಸೆಯಂತೆ ಪಾರ್ಥಿವ ಶರೀರಕ್ಕೆ ಕರ್ಣನ ಮುಖವರ್ಣಿಕೆ ಹಾಕಿ ಅಂತ್ಯಕ್ರಿಯೆ ನಡೆಸಲಾಗಿದೆ.

ಗೇರಸೊಪ್ಪಾ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಮ್ಮಿಕೊಂಡಿದ್ದ ಯಕ್ಷಪೂರ್ಣಿಮೆಯ ಉದ್ಘಾಟನಾ ದಿನ, ಅಂದರೆ ಸೆ.21ರಂದು ಶ್ರೀದೇವಿ ಮಹಾತ್ಮೆಯ ಪ್ರಸಂಗದಲ್ಲಿ ವಿದ್ಯುನ್ಮಾಲಿ ಪಾತ್ರ ನಿರ್ವಹಿಸಿದ್ದ ಅವರು, ಸೆ.25ರಂದು ಭೀಷೊತ್ಪತ್ತಿ ಪ್ರಸಂಗದಲ್ಲಿ ಶಂತನು ವೇಷ ಹಾಕಿದ್ದರು. ಮರುದಿನವೇ ಅನಾರೋಗ್ಯಕ್ಕೆ ತುತ್ತಾಗಿದ್ದ ಚಿಟ್ಟಾಣಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೋಗುವ ಮುನ್ನ ಅವರು ಸಹ ಕಲಾವಿದ ರಾಘವ ಕಾಮನಮಕ್ಕಿ ಅವರಲ್ಲಿ ವಾಪಸ್‌ ಬಂದು ಕರ್ಣನ ಪಾತ್ರ ನಿರ್ವಹಿಸುವುದಾಗಿ ಕೇಳಿಕೊಂಡಿದ್ದರು. ಆದರೆ ಚಿಟ್ಟಾಣಿಯವರು ಚೇತರಿಸಿಕೊಂಡು ಮರಳಲಿಲ್ಲ. ಅವರ ಕೊನೆಯಾಸೆ ಪೂರೈಸುವ ನಿಟ್ಟಿನಲ್ಲಿ ಪಾರ್ಥಿವ ಶರೀರಕ್ಕೆ ಕರ್ಣನ ಮುಖವರ್ಣಿಕೆ ಹಾಕಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ: ಮಂಗಳವಾರ ನಿಧನರಾದ ಯಕ್ಷಗಾನ ಲೋಕದ ಧ್ರುವತಾರೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಅಂತ್ಯಸಂಸ್ಕಾರ ಬುಧವಾರ ರಾತ್ರಿ 9.30ರ ಸುಮಾರಿಗೆ ಮನೆಯ ಪಕ್ಕದ ಜಾಗದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಹಿರಿಯ ಮಗ ಸುಬ್ರಹ್ಮಣ್ಯ ಹೆಗಡೆ ಹಿಂದೂ ವಿಧಿ ವಿಧಾನಗಳ ಮೂಲಕ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

RELATED ARTICLES  ಹೆದ್ದಾರಿಯಲ್ಲಿ ಸೀಬರ್ಡ ಬಸ್ ಪಲ್ಟಿ.

ಪತ್ನಿ ಸುಶೀಲಾ, ಮಕ್ಕಳಾದ ನರಸಿಂಹ ಹೆಗಡೆ, ನಾರಾಯಣ ಹೆಗಡೆ, ಲಲಿತಾ, ಸೊಸೆಯಂದಿರು. ಮೊಮ್ಮಕ್ಕಳು, ಬಂಧು, ಬಳಗ, ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಮೊದಲು ಚಿಟ್ಟಾಣಿಯವರ ಆಶಯದಂತೆ ಮ್ಯೂಸಿಯಂಗೆ ಶಿಲಾನ್ಯಾಸ ನೆರವೇರಿಸಿದ ಜಾಗದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅಲ್ಲಿ ಮುಂದೆ ಚಿಟ್ಟಾಣಿಯವರ ಸಮಾಧಿ ನಿರ್ಮಾಣ ಹಾಗೂ ಬಯಲು ರಂಗಮಂದಿರ ನಿರ್ಮಿಸುವ ಆಶಯ ಇದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಣಿಪಾಲ ಆಸ್ಪತ್ರೆಯಿಂದ ಹೊರಟ ಪಾರ್ಥಿವ ಶರೀರದ ಅಂತಿಮಯಾತ್ರೆ ಮಧ್ಯಾಹ್ನದ ವೇಳೆಗೆ ಹೊನ್ನಾವರ ತಲುಪಿತು. ದಾರಿಯುದ್ದಕ್ಕೂ ಅವರ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದರು. ಪೊಲೀಸ್‌ ಪೆರೇಡ್‌ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅಂತಿಮ ಆಸೆ ಈಡೇರಲೇ ಇಲ್ಲ !

ಮೇರು ಕಲಾವಿದರಾದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಕರ್ಣನ ಪಾತ್ರ ನಿರ್ವಹಿಸುವ ಕೊನೆಯ ಆಸೆ ಈಡೇರಲೇ ಇಲ್ಲ. ಗೇರಸೊಪ್ಪಾ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಮ್ಮಿಕೊಂಡಿದ್ದ ಯಕ್ಷಪೂರ್ಣಿಮೆಯ ಉದ್ಘಾಟನ ದಿನ ಸೆ. 21ರಂದು “ಶ್ರೀದೇವಿ ಮಹಾತ್ಮೆ’ ಪ್ರಸಂಗದಲ್ಲಿ ವಿದ್ಯುನ್ಮಾಲಿ ಪಾತ್ರ ನಿರ್ವಹಿಸಿ, ಸೆ. 25ರಂದು “ಭೀಷೊತ್ಪತ್ತಿ’ ಪ್ರಸಂಗದಲ್ಲಿ ಶಂತನು ಪಾತ್ರ ನಿರ್ವಹಿಸಿದ್ದ ಚಿಟ್ಟಾಣಿ ಅವರು, ಮರುದಿನ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಣಿಪಾಲ ಆಸ್ಪತ್ರೆಗೆ ತೆರಳುವ ಮುನ್ನ ಮರಳಿ ಬಂದು ಕರ್ಣನ ಪಾತ್ರ ನಿರ್ವಹಿಸುವುದಾಗಿ ಸಹಕಲಾವಿದ ರಾಘವ ಕಾಮನಮಕ್ಕಿ ಅವರಲ್ಲಿ ಹೇಳಿಕೊಂಡಿದ್ದರು. ಆದರೆ ಚಿಟ್ಟಾಣಿ ಅವರು ಚೇತರಿಸಿಕೊಂಡು ಮರಳಲಿಲ್ಲ.

RELATED ARTICLES  ದರ್ಗಾವನ್ನು ಧ್ವಂಸಮಾಡಿದ ಕಿಡಿಗೇಡಿಗಳು..!

ಅವರ ಕೊನೆಯಾಸೆ ಪೂರೈಸುವ ನಿಟ್ಟಿನಲ್ಲಿ ಕರ್ಣ ಪಾತ್ರದ ಬಣ್ಣವನ್ನು ಅವರ ಪಾರ್ಥಿವ ಶರೀರಕ್ಕೆ ಬಳಿದು ಅವರ ಅಂತಿಮ ಆಸೆ ಕೈಗೂಡಿಸಲಾಗಿದೆ ಎಂದು ಸಹಕಲಾವಿದ ರಾಘವ ಕಾಮನಮಕ್ಕಿ ತಿಳಿಸಿದ್ದಾರೆ. ಯಕ್ಷಗಾನ ರಂಗಭೂಮಿಯ ದಿಗ್ಗಜರಾದ ಈರ್ವರಲ್ಲಿ ಓರ್ವರಾದ ಕೆರೆಮನೆ ಶಂಭು ಹೆಗಡೆ ಅವರು ಶ್ರೀರಾಮ ನಿರ್ಯಾಣ ಪ್ರಸಂಗದಲ್ಲಿ ಬಣ್ಣಹಚ್ಚಿ ಕುಣಿಯುತ್ತಲೇ ಪರಂಧಾಮಗೈದರೆ, ಪದ್ಮಶ್ರೀ ಚಿಟ್ಟಾಣಿ ಅವರ ಆಸೆಯಂತೆ ಅವರ ಪಾರ್ಥಿವ ಶರೀರಕ್ಕೆ ಬಣ್ಣ ಹಚ್ಚಿಸಿಕೊಂಡು ಪರಂಧಾಮಗೈದಿದ್ದಾರೆ.