ಹುಬ್ಬಳ್ಳಿ: ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಮತ್ತೆ ಉಲ್ಬಣಿಸಿದೆ. ಭಾರತದಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ನಿಯಮಗಳನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ 19 ಸಾಂಕ್ರಾಮಿಕದ ಬಗ್ಗೆ ಗಾಬರಿಯಾಗಬೇಕಿಲ್ಲ ಆದರೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಹೇಳಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಳೆ ಕೋವಿಡ್ ಕುರಿತು ಕಂದಾಯ ಸಚಿವರು ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸಭೆ ನಡೆಸಲಿದ್ದು, ಬೂಸ್ಟರ್ ಡೋಸ್ಗಳನ್ನು ಕೊಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರಗಳನ್ನು ಏರ್ಪಡಿಸುವುದು, ಪರೀಕ್ಷೆಗಳನ್ನು ನಡೆಸುವುದು, ಪ್ರತಿಯೊಂದು ಐಎಲ್ ಐ, ಸಾರಿ ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ಕೈಗೊಳ್ಳುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ಮೂಲಸೌಕರ್ಯ ಗಳಾದ ಔಷಧಿ, ಲಸಿಕೆ ಇವೆಲ್ಲವನ್ನೂ ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸಬೇಕು, ಯಾವುದೇ ಸಂದರ್ಭದಲ್ಲಿ ಯಾವುದೇ ಕೊರತೆಯಾಗಬಾರದು, ಆಮ್ಲಜನಕ ಘಟಕಗಳನ್ನು ಡ್ರೈ ರನ್ ಮಾಡಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಯೂ ನಿರಂತರವಾಗಿ ನಿಗಾ ವಹಿಸಿ, ನಿರ್ಬಂಧಗಳನ್ನು ಹೇರಲಾಗಿದೆ. ವ್ಯಕ್ತಿ, ಸಂಘ, ಸರ್ಕಾರ, ಸಮಾಜ ಎಲ್ಲರೂ ಸೇರಿ ಇದನ್ನು ಎದುರಿಸಬೇಕಿದೆ. ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.
ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಉತ್ತರಿಸುತ್ತಾ, ಐಎಲ್ ಐ ಮತ್ತು ಸಾರಿಗಳ ಪರೀಕ್ಷೆ ಹೆಚ್ಚಿಸಲಾಗುವುದು ಹಾಗೂ ಬೂಸ್ಟರ್ ಡೋಸ್ ಗಳನ್ನು ಹೆಚ್ಚಿಸಲಾಗುವುದು. ಆಸ್ಪತ್ರೆಗಳಲ್ಲಿ ಆಕ್ಸಿಜನ್ , ಬೆಡ್ ಗಳು ಸೇರಿದಂತೆ ಮೂಲಭೂತಸೌಕರ್ಯಗಳನ್ನು ಸಜ್ಜುಗೊಳಿಸುವುದು ಹಾಗೂ ಐಸಿಯು ಘಟಕಗಳನ್ನು ಸಿದ್ದಪಡಿಸಿಕೊಳ್ಳುವುದು. ಮಾಸ್ಕ್ ಗಳನ್ನು ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು. ಏರ್ ಪೋರ್ಟ್, ಮತ್ತು ಬಸ್ ನಿಲ್ದಾಣಗಳಲ್ಲಿ ಮೊದಲು ಪಾಲಿಸುತ್ತಿದ್ದ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.