ಶಿರಸಿ: ಗುರಿ ತಲುಪಲು ಗುರು ಬೇಕು. ಗುರುವಿನ ಮಾರ್ಗದರ್ಶನವಿದ್ದರೆ ಎಂಥ ಸಾಧನೆ ಆದರೂ ಸಾಧನೆ ಮಾಡಲು ಸಾಧ್ಯ ಎಂದು ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೇಳಿದರು. ಅವರು ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಿಯಾರ್ಡ್ಸ್ ಸಂಸ್ಥೆಯ ಚಂದನ ಆಂಗ್ಲ ಮಾಧ್ಯಮ ಸಂಸ್ಥೆಯ ಚಂದನ ವಾರ್ಷಿಕ ಹಬ್ಬಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕೆಲಸ ಮಾಡಲು ಶಿಕ್ಷಕರು, ಪಾಲಕರ ಸೇವೆ ದೊಡ್ಡದು ಎಂದ ಅವರು, ಮೌನವಾಗಿ ಮಾಡುವ ಸಾಧನೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಬಳಸುವದು ಆತಂಕಕ್ಕೆ ಕಾರಣವಾಗಿದೆ ಎಂದರು.
ಮನೆತನ, ಗ್ರಾಮ, ಜಿಲ್ಲೆ, ರಾಜ್ಯ, ರಾಷ್ಟ್ರ, ವಿಶ್ವಕ್ಕೇ ಸಾಧನೆ ಮಾಡಿ ಬೆರಗುಗೊಳಿಸಿದ್ದಾರೆ. ಅಕ್ಷರ, ಅಂಕದಿಂದಲೂ ಯಾವ ಎತ್ತರಕ್ಕೆ ಏರಬಹುದೋ? ಅಂಥ ಎತ್ತರಕ್ಕೆ ಸಾಧಕರ ಜೀವನ ಓದಿದರೆ ಸಿಗುತ್ತದೆ. ಸಾವಾಲು, ಬಡತನದಲ್ಲೇ ಸಾಧನೆ ಮಾಡಿದವರು ಸಿಗುತ್ತಾರೆ. ಜ್ಞಾನದ ಸಿರಿತನಕ್ಕೆ ಕೆಲಸ ಮಾಡಬೇಕು ಎಂದರು.
ಸ್ವಾಸ್ಥ್ಯ ಟ್ರಾನ್ಸರ್ಮೇಶನ್ ನಿರ್ದೇಶಕ ವಿಜಯ ಪ್ರಸಾದ, ಏಕಾಗ್ರತೆ, ಅಭ್ಯಾಸದ ಕಲೆಯಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಸಾಧನೆ ಸಾಧ್ಯ. ಚಂದನ ಶಾಲೆ ಮಾದರಿಯ ಶಾಲೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಲೆನಾಡು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಲ್.ಎಂ.ಹೆಗಡೆ ಪ್ರಸ್ತಾವಿಕ ಮಾತನಾಡಿ, ಮಗು ಕೇಂದ್ರೀಕೃತ ಶಾಲೆ. ಇದರ ಪರಿಣಾಮ ಎಸ್ಸೆಸ್ಸೆಲ್ಸಿಯಲ್ಲಿ ಕಾಣುತ್ತಿದ್ದೇವೆ ಎಂದರು.
ಜಿ.ಪಂ. ಮಾಜಿ ಸದಸ್ಯೆ ಉಷಾ ಹೆಗಡೆ, ತಾ.ಪಂ. ಮಾಜಿ ಸದಸ್ಯೆ ರತ್ನಾ ಶೆಟ್ಟಿ, ಮಾಯಾಚಾರಿ ಇತರರು ಇದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಹೆಗಡೆ ವಹಿಸಿಕೊಂಡರು. ಮುಖ್ಯಾಧ್ಯಾಪಕರಾದ ಕಲ್ಪನಾ ಹೆಗಡೆ, ಶಾಂತಾರಾಮ ನಾಯ್ಕ ವರದಿ ವಾಚಿಸಿದರು. ಆಡಳಿತ ಮಂಡಳಿ ಸದಸ್ಯ ಸತೀಶ ಕೆ. ಹೆಗಡೆ ಗೋಳಿಕೊಪ್ಪ ವಂದಿಸಿದರು. ವಿದ್ಯಾರ್ಥಿಗಳಾದ ಗೌತಮ್ ಹೆಗಡೆ, ಪ್ರಾರ್ಥನಾ ಹೆಗಡೆ ನಿರ್ವಹಿಸಿದರು.
ಇದೇ ವೇಳೆ ಶ್ರೇಣಿ ವಿಜೇತ ಹಾಗೂ ವಿವಿಧ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಚಂದನ ಚಿಗುರು ಪತ್ರಿಕೆ ಕೂಡ ಬಿಡುಗಡೆಗೊಳಿಸಲಾಯಿತು.
ಸಾಧನೆಗೆ ಕಠಿಣ ತಪಸ್ಸು, ಮನಸ್ಸು ಬೇಕು. ಸಾಧಕರ ಹೆಸರು ಪ್ರಶಸ್ತಿ ಮಾತ್ರ ಕಾಣುತ್ತದೆ. ಸಾಧನೆ ಮಾಡುವಾಗ ಸನ್ಮಾನಕ್ಕೆ ಹೆದರಬೇಕು. ಅವಮಾನಕ್ಕೆ ಹೆದರಬಾರದು.