ಕುಮಟಾ: ಗಣಿತದ ವಿವಿಧ ರೀತಿಯ ಪರಿಕಲ್ಪನೆಗಳ ಅಮೂರ್ತತೆಯನ್ನು ಮೂರ್ತತೆಯ ಸ್ವರೂಪದಲ್ಲಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಲು ಮಕ್ಕಳೇ ತಯಾರಿಸಿದ ಅಂಕಗಣಿತ, ಬೀಜ ಗಣಿತ, ರೇಖಾಗಣಿತಕ್ಕೆ ಸಂಬಂಧಿಸಿದಂತೆ ಕೋನಗಳು, ಘನಾಕೃತಿಗಳು, ತ್ರಿಭುಜಗಳು, ಸರಳ ರೀತಿಯಲ್ಲಿ ಮಾಡಬಹುದಾದ ಸಂಕಲನ, ಗುಣಾಕಾರ, ವ್ಯವಕಲನ, ಭಾಗಾಕಾರ, ಬೀಜಾಕ್ಷರಗಳು, ಕಲಿಕಾ ಚೇತರಿಕೆ ಪೂರಕ ಚಟುವಟಿಕೆಗಳು ಮೊದಲಾದಗಳನ್ನು ಬಿಂಬಿಸುವ ಮಾದರಿಗಳು ವೀಕ್ಷಿಸಿದ ಪಾಲಕರಲ್ಲಿ ಅಧಿಕಾರಿಗಳಲ್ಲಿ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವಂತೆ ಮಾಡಿವೆ ಎಂದು ಹೆಗಡೆ ಕ್ಲಸ್ಟರನ ಸಿ. ಆರ್. ಪಿಗಳಾದ ಎನ್. ಆರ್. ನಾಯ್ಕ ಅಭಿಪ್ರಾಯಪಟ್ಟರು. ಅವರು ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿದ ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡುತ್ತಾ ವ್ಯವಹಾರಿಕ ಜ್ಞಾನ ಮತ್ತು ಕಲಿಕೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಿತ್ಯ ಜೀವನದಲ್ಲಿ ಅನುಭವಿಸುವ ತೊಂದರೆಗಳಿಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ಮೂಡಿಸುದೇ ಪರಿಹಾರ. ಮಕ್ಕಳು ಸಮಾಜದಲ್ಲಿ ಭವಿಷ್ಯವನ್ನು ಧೈರ್ಯದಿಂದ ಎದುರಿಸಲು ಮಕ್ಕಳ ಸಂತೆ ಪೂರಕವಾಗಿದೆ. ಇಂತಹ ಒಂದು ಸಂದರ್ಭವನ್ನು ಮಕ್ಕಳಿಗೆ ಒದಗಿಸಿಕೊಟ್ಟ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕರನ್ನ ಮತ್ತು ಎಸ್ಡಿಎಂಸಿ ಅವರನ್ನು ಹಾಗೂ ವಿದ್ಯಾರ್ಥಿಗಳನ್ನು ಇಲಾಖೆ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕಿ ಮಂಗಲ ಹೆಬ್ಬಾರ್ ಗಣಿತಕ್ಕೆ ಭಾರತೀಯರ ಕೊಡುಗೆ ಬಹಳ ದೊಡ್ಡದಿದೆ. ಶ್ರೀನಿವಾಸ್ ರಾಮಾನುಜಂ ಅವರು ಗಣಿತ ಕ್ಷೇತ್ರದಲ್ಲಿ ತೋರಿದ ಅಗಾಧ ಜ್ಞಾನ ಅವರ ಹುಟ್ಟುಹಬ್ಬವನ್ನು ಗಣಿತ ದಿನಾಚರಣೆಯನ್ನಾಗಿ ಆಚರಿಸಲು ಪ್ರೇರಕವಾಗಿದೆ. ಮಕ್ಕಳಲ್ಲಿ ಸ್ವಾವಲಂಭಿತನ ಬರಬೇಕಾದರೆ ಅದು ಕೇವಲ ಅಂಕ ಗಳಿಕೆಯಿಂದ ಮಾತ್ರ ಸಾಧ್ಯವಾಗದು. ವ್ಯವಹಾರಿಕ ದೃಷ್ಟಿಯಿಂದ ಪರಿಣಿತನಾದಾಗ ಮಾತ್ರ ಮಕ್ಕಳು ಭವಿಷ್ಯವನ್ನು ಸುಲಭವಾಗಿ ಎದುರಿಸಬಹುದು. ಈ ದಿಶೆಯಲ್ಲಿ ಮಕ್ಕಳಿಗೆ ಸದಾವಕಾಶ ಒದಗಿಸಿಕೊಡಲು ಮಕ್ಕಳೇ ತಯಾರಿಸಿದ ಗಣಿತದ ಮಾದರಿ ಪ್ರದರ್ಶನ ಮತ್ತೊಂದೆಡೆ ಮಕ್ಕಳೇ ಅಂಗಡಿ ಮುಂಗಟ್ಟುಗಳನ್ನು ಇಟ್ಟು ಅಂಗಡಿಯ ಮಾಲೀಕರಾಗಿ ವ್ಯವಹಾರ ನಡೆಸಿದರೆ ಮತ್ತೆ ಕೆಲವರು ಗ್ರಾಹಕರಾಗಿ ಜೊತೆಗೆ ಸ್ಥಳೀಯರು, ಪಾಲಕರು, ಪೋಷಕರು ಗ್ರಾಹಕರಾಗಿ ಮಕ್ಕಳೊಂದಿಗೆ ವ್ಯವಹಾರ ನಡೆಸುವುದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ಮಾತನಾಡಿ ಬಹುತೇಕ ಮಕ್ಕಳು ಕೇವಲ ತಮ್ಮ ಜ್ಞಾನ ಅಂಕ ಗಳಿಕೆಗೆ ಸೀಮಿತಗೊಳಿಸಿಕೊಂಡಿದ್ದಾರೆ ಅಂಕ ಅದು ಕಲಿಕೆಯ ಒಂದು ಮಾನದಂಡ ಅಷ್ಟೇ. ಪೂರಕವಾಗಿ ಮಕ್ಕಳು ಮನೆಯಲ್ಲಿ ತಮ್ಮ ಪಾಲಕರೊಂದಿಗೆ ಸಮಾಜದಲ್ಲಿ ಹಿರಿ-ಕಿರಿಯರೊಂದಿಗೆ ಮಾರುಕಟ್ಟೆಯಲ್ಲಿ ವ್ಯವಹರಿಸುವ ರೀತಿ ನೀತಿಗಳು ಬಾಲ್ಯದಲ್ಲಿಯೇ ಕರಗತವಾದರೆ ಅದು ತುಂಬಾ ಅನುಕೂಲವಾಗುತ್ತದೆ ಇದಕ್ಕೆ ನಮ್ಮ ಶಾಲೆಯಲ್ಲಿ ಇಂದು ಆಯೋಜಿಸಿರುವ ಮಕ್ಕಳ ಸಂತೆ ಮತ್ತು ಗಣಿತ ದಿನಾಚರಣೆ ಮಕ್ಕಳಲ್ಲಿ ಪ್ರೇರಕ ಶಕ್ತಿ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಯೋಗಿತಾ ನಾಯ್ಕ್ ಶುಭ ಕೋರಿದರು. ಶಿಕ್ಷಕರಾದ ಶಾಮಲಾ ಪಟಗಾರ, ಶ್ರೀಧರ್ ಗೌಡ, ನಯನ ಪಟಗಾರ್, ಭಾಗ್ಯಲಕ್ಷ್ಮಿ ನಾಯಕ್, ಲಕ್ಷ್ಮಿ ನಾಯ್ಕ ಸಹಕರಿಸಿದರು.
ವಿದ್ಯಾರ್ಥಿನಿಯರಾದ ಸಂಜನಾ ನಾಯ್ಕ ಸ್ವಾಗತಿಸಿದರೆ, ರಕ್ಷ ನಾಯ್ಕ ವಂದಿಸಿದರು. ಧನ್ಯಶ್ರೀ ಪಟಗಾರ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಸಂತೆಯಲ್ಲಿ ಪಾಲಕ ಪೋಷಕರು ಸ್ಥಳೀಯರು ಶಿಕ್ಷಕರು ಭಾಗಿಯಾಗಿ ವ್ಯವಹಾರ ನಡೆಸಿದರು. ಸಂತೆಯಲ್ಲಿ ಸುಮಾರು 12 ಸಾವಿರ ರೂಪಾಯಿ ವ್ಯವಹಾರ ನಡೆದಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು ಕಾರಣವಾಯಿತು.