ಬೆಂಗಳೂರು : ಕೊರೊನಾ ಉಪತಳಿ ಬಿಎಫ್ 7 ಭಾರತ ಪ್ರವೇಶಿಸಿದ್ದರಿಂದ ರಾಜ್ಯದಲ್ಲಿ ಸಹಜವಾಗೇ ಆತಂಕ ಎದುರಾಗಿದೆ. ಕೇಂದ್ರದಿಂದ ಒಂದಷ್ಟು ಸೂಚನೆಗಳು ಬಂದಿವೆ. ಸೋಮವಾರ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೊನಾ ಸೋಂಕು, ಉಪತಳಿ ಕುರಿತು ಜನರು ಗಾಬರಿಯಾಗಬೇಕಾಗಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರ ಸೂಚಿಸುವ ನಿಯಮ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದರು.
ಕೊರೊನಾ ಬಗ್ಗೆ ಆರೋಗ್ಯ ಸಚಿವರು ಮತ್ತು ವಿಪತ್ತು ನಿರ್ವಹಣಾ ಸಚಿವರು ಹಾಗೂ ತಜ್ಞರು ಚರ್ಚಿಸಲಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಜ್ಯಕ್ಕೆ ಕೆಲವು ಮಾರ್ಗಸೂಚಿಗಳು ಬಂದಿದ್ದು ಸೂಚಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರದಿಂದಲೂ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಈ ಸಂಬಂಧ ಸೋಮವಾರ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.
ಚೀನಾ, ಜಪಾನ್, ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಕೊರೊನಾ ವ್ಯಾಪಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ಅನಾರೋಗ್ಯದ ಬೆಳವಣಿಗೆಗಳ ಪರಿಣಾಮ ದೇಶ ಹಾಗೂ ರಾಜ್ಯದ ಮೇಲೂ ಆಗಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ದೇಶದಲ್ಲಿ ಭಾನುವಾರ ರಾತ್ರಿ 227 ಹೊಸ ಕೋವಿಡ್ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಇಲಾಖೆ ಮೇಲಿಂದ ಮೇಲೆ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸುತ್ತಿವೆ. ತಜ್ಞರು ಹಾಗೂ ಆರೋಗ್ಯ ಇಲಾಖೆ ಜೊತೆ ಸಭೆ ನಿರಂತರವಾಗಿ ನಡೆಯುತ್ತಿವೆ. ಇದರ ಭಾಗವಾಗಿಯೇ ಕರ್ನಾಟಕಕ್ಕೆ ಒಂದಷ್ಟು ಸೂಚನೆಗಳನ್ನು ಕೇಂದ್ರ ಸರ್ಕಾರ ನೀಡಿದೆ ಎನ್ನಲಾಗಿದೆ. ಅವುಗಳು ಏನು? ರಾಜ್ಯ ಸರ್ಕಾರ ಎಂತಹ ಕಠಿಣ ನಿಯಮ ಅನುಸರಿಸಲಿದೆ ಎಂಬುದು ಸೋಮವಾರ ಗೊತ್ತಾಗಲಿದೆ.