ಬೆಂಗಳೂರು: ಚೀನಾದಿಂದ ಬೆಂಗಳೂರಿಗೆ ಆಗಮಿಸಿರುವ ವ್ಯಕ್ತಿ ಸೇರಿದಂತೆ 9 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಜಧಾನಿ ಬೆಂಗಳೂರಿನಲ್ಲಿ BF.7 ಆತಂಕ ಹೆಚ್ಚಾಗಿದೆ. ಬೆಳಗಾವಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಳೆದ ಮೂರು ದಿನಗಳಲ್ಲಿ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಏರ್ ಪೋರ್ಟ್ ಗೆ ಬಂದಿದ್ದ ಪ್ರಯಾಣಿಕರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಇದೀಗ 9 ಜನರಲ್ಲಿ ಪಾಸಿಟಿವ್ ಬಂದಿದೆ.
ಚೀನಾದಿಂದ ಆಗಮಿಸಿರುವ 35 ವರ್ಷದ ವ್ಯಕ್ತಿ ಹಾಗೂ ಆಗ್ರಾದಿಂದ ಬಂದಿರುವ 35 ವರ್ಷದ ವ್ಯಕ್ತಿ ಸೇರಿದಂತೆ ನಾಲ್ವರು ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸೋಲೇಟ್ ಮಾಡಲಾಗಿದೆ. ಜಿನೊವಿಕ್ ಸೀಕ್ವೆನ್ಸ್ ವರದಿಗೆ ಕಾಯಲಾಗುತ್ತಿದೆ. ಉಳಿದವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದರು.
ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರ ಪೈಕಿ 9 ಮಂದಿ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 5 ಮಂದಿಗೆ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅವರಿಗೆ ಮನೆಯಲ್ಲಿದ್ದು ಸಂಪೂರ್ಣ ಗುಣಮುಖ ಆದ ನಂತರವೇ ಮನೆಯಿಮದ ಹೊರಬರುವಂತೆ ಸೂಚಿಸಲಾಗಿದೆ. ಉಳಿದಂತೆ 4 ಮಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಓರ್ವ ವ್ಯಕ್ತಿ ಚೀನಾದಿಂದ ಬಂದಿದ್ದಾನೆ. ಒಟ್ಟಾರೆ ಒಂಭತ್ತೂ ಕೋವಿಡ್ ಸೋಂಕಿತರ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ರೂಪಾಂತರಿ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.