ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್ (50) ಮೃತಪಟ್ಟ‌ ದುರ್ದೈವಿಯಾಗಿದ್ದು ಇವರ ಮೃತದೇಹವು ಸೋಮವಾರ ಪತ್ತೆಯಾಗಿದೆ.

ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂಗಿ ಮತ್ತು ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸ ಬಂದಿದ್ದರು. ಆಂಧ್ರಪ್ರದೇಶದ ಮೂಲದವರಾದ ಇವರು ಹುಬ್ಬಳ್ಳಿಯಲ್ಲಿ ರೈಲ್ವೇ ಕಾಮಗಾರಿ ಗುತ್ತಿಗೆದಾರರಾಗಿದ್ದರು ಎಂದು ತಿಳಿದುಬಂದಿದೆ. ತಮ್ಮ ಮಗನೊಂದಿಗೆ ನೀರಿಗಿಳಿದಿದ್ದ ಇವರು ನೀರಿನಲ್ಲಿ ಅಚಾನಕ್ ಆಗಿ ಮುಳುಗಿದರು. ರಕ್ಷಿಸಲು ಸ್ಥಳೀಯರು, ಉಳಿದ ಪ್ರವಾಸಿಗರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

RELATED ARTICLES  ಅಪ್ಸರಕೊಂಡ ಮಠದಲ್ಲಿ ಪುನಃಪ್ರತಿಷ್ಠಾ-ಬ್ರಹ್ಮಕಲಶೋತ್ಸವ ಇಂದಿನಿಂದ.

ವಿಷಯ ತಿಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಳ್ಳಿ, ಸಮಿತಿಯ ಸದಸ್ಯರಾದ ಶ್ರೀಪತಿ ಮೆಣಸುಮನೆ, ಶಶಿಧರ ಕೋಟೆಮನೆ, ರಾಘವೇಂದ್ರ ಮೆಣಸುಮನೆ, ಯಶವಂತ ಪಟಗಾರ, ಡಿ.ಆರ್.ಎಫ್.ಒ ಶಿವಾನಂದ, ಕಾವಲುಗಾರ ಸಂಗಮೇಶ ಹಾಗೂ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ರಾತ್ರಿ 11 ಗಂಟೆಯವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.

RELATED ARTICLES  ಹಿರಿಯ ವೈದಿಕರಾದ ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಇನ್ನಿಲ್ಲ.

ಬೆಳಿಗ್ಗೆ ಹುಡುಕಾಟ ತೀವ್ರಗೊಳಿಸಿದಾಗ, 10.30 ಗಂಟೆಯ ಸುಮಾರಿಗೆ ನೀರಿನಲ್ಲಿ ಮೃತದೇಹ ದೊರೆಯಿತು. ವಿಷಯ ತಿಳಿದ ಸಂಬಂಧಿಕರು, ಸ್ನೇಹಿತರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿದ್ದರು. ಯಲ್ಲಾಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.