ಬೆಳಗಾವಿ:  ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.

ಅತ್ಯುತ್ತಮ ಶಾಸಕ ಪ್ರಶಸ್ತಿ ಕಳೆದ ವರ್ಷದಿಂದ ಆರಂಭಗೊಂಡಿದ್ದು, ಮೊದಲ ಪ್ರಶಸ್ತಿಯನ್ನು ಶಿಕಾರಿಪುರ ಶಾಸಕ ಬಿ.ಎಸ್. ಯಡಿಯೂರಪ್ಪಗೆ ನೀಡಲಾಗಿತ್ತು. ಹಾಗೆಯೇ ಜಿಲ್ಲೆಯ ಹಳಿಯಾಳ ಕ್ಷೇತ್ರದ ಶಾಸಕರಾಗಿರುವ ಆರ್.ವಿ. ದೇಶಪಾಂಡೆ 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

RELATED ARTICLES  ಅಂಕೋಲಾದ ದತ್ತಾತ್ರೇಯ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ


ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೈಗಾರಿಕಾ ಸಚಿವರಾಗಿ ಸುದೀರ್ಘ 10 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಆರ್.ವಿ.ದೇಶಪಾಂಡೆಯವರಿಗೆ ಸಲ್ಲುತ್ತಿದ್ದು, ಕರ್ನಾಟಕದಲ್ಲಿ ಕೈಗಾರೀಕರಣ ಹಾಗೂ ಕೈಗಾರಿಕಾ ನೀತಿ ರೂಪಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆ ಬದಲಾವಣೆ, ಉದಾರೀಕರಣ ಹಾಗೂ ಜಾಗತೀಕರಣದ ಲಾಭವನ್ನು ರಾಜ್ಯಕ್ಕೆ ಲಭಿಸುವಂತೆ ಮಾಡಲು ಪ್ರಾಮಾಣಿಕವಾಗಿ ಪರಿಶ್ರಮಪಟ್ಟಿದ್ದಾರೆ. ರಾಜ್ಯದಲ್ಲಿ ಟೊಯೊಟಾ ಕಾರ್ಖಾನೆಗೆ ರಿಯಾಯ್ತಿಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಾಜ್ಯದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಶ್ರಮಿಸಿದ್ದಾರೆ ಎಂದರು.

ಅತ್ಯುತ್ತಮ ಶಾಸಕ ಪ್ರಶಸ್ತಿ ಆರ್.ವಿ.ದೇಶಪಾಂಡೆಯವರಿಗೆ ಸಂದಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ಸರ್ವಸಮ್ಮತದ ಆಯ್ಕೆಯಲ್ಲಿ ವಿಧಾನಮಂಡಲದ ವಿಧಾನಸಭೆಯ ನಡೆವಳಿಕೆಗಳನ್ನು ಎತ್ತರದ ಮಟ್ಟದಲ್ಲಿ ನಿಭಾಯಿಸುವುದನ್ನು ತಮ್ಮ ನಡತೆಯಿಂದ ಕಳೆದ 8 ಬಾರಿ ಆಯ್ಕೆಯಲ್ಲಿ ಅವರು ತೋರಿಸಿಕೊಟ್ಟಿದ್ದಾರೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯ, ದೇಶಪಾಂಡೆಯವರು, ಎಂಪಿ ಪ್ರಕಾಶ್ ಅವರನ್ನೂ ಸೇರಿದಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿದ ದೊಡ್ಡ ತಂಡ 1983 ರಲ್ಲಿ ಬೆಳಕಿಗೆ ಬಂತು. ಅದು ಕರ್ನಾಟಕದ ರಾಜಕಾರಣ ಬದಲಿಸಿದ ಅವಧಿಯಾಗಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ 2ನೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ದೇಶಪಾಂಡೆಯವರನ್ನು ಸಚಿವರನ್ನಾಗಿ ಮಾಡಲಾಯಿತು. ಅಂದಿನಿಂದ ವಿವಿಧ ಖಾತೆಗಳಲ್ಲಿ ದಕ್ಷತೆಯಿಂದ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

RELATED ARTICLES  ಕುಮಟಾ ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪರಂಪರಾ ಕೂಟ.