Satwadhara News

ಯುವಜನತೆ ಅಪರಾಧಮುಕ್ತವಾಗಿದ್ದರೆ ಸ್ವಸ್ಥಸಮಾಜ ನಿರ್ಮಾಣ ಸಾಧ್ಯ- ಸಿ ಪಿ ಆಯ್ ತಿಮ್ಮಪ್ಪ ನಾಯಕ್.

ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ ಕೆ ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಉತ್ತರಕನ್ನಡ ಜಿಲ್ಲಾ ಪೋಲೀಸ್ ಭಟ್ಕಳ ಉಪವಿಭಾಗ ಕುಮಟಾ ಪೋಲೀಸ್ ಠಾಣೆಯ ವತಿಯಿಂದ
ಅಪರಾಧ ತಡೆ ಮಾಸಾಚರಣೆ 2022 ರ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.


ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕ ಕುಮಟಾ ತಿಮ್ಮಪ್ಪ ನಾಯಕ್ ರವರು ಇತ್ತೀಚೆಗೆ ಯುವಜನಾಂಗ ಆಪರಾಧಿಕ ಚಟುವಟಿಕೆಗಳಲ್ಲಿ ಹೆಚ್ಚುಹೆಚ್ಚು ತೊಡಗುತ್ತಿರುವುದು ವಿಷಾಧದ ಸಂಗತಿ ಆಗಿದೆ.ಹೆಚ್ಚಿನ ಪ್ರಕರಣಗಳಲ್ಲಿ ಸುಶೀಕ್ಷಿತರೇ ಭಾಗಿಯಾಗಿರುವುದು ತನಿಖೆಗಳಿಂದ ಸಾಬೀತಾಗುತ್ತಿವೆ. ಶಿಕ್ಷಣದ ಮೂಲ ಉದ್ದೇಶ ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗಿದೆಯೇ ಹೊರತು ಅಪರಾಧಿಗಳನ್ನು ಸೃಷ್ಟಿಸುವುದಲ್ಲ.ಒಂದು ಪ್ರದೇಶದ ಜನಸಂಖ್ಯೆಗೆ ಹೋಲಿಸಿದರೆ ಅಲ್ಲಿಯ ಆರಕ್ಷಕರ ಸಂಖ್ಯೆ ಕಡಿಮೆ ಇರುತ್ತದೆ ನಾಗರಿಕರ ಸಹಕಾರ ಇಲ್ಲದೇ ಪೋಲೀಸ್ ವ್ಯವಸ್ಥೆ ದಕ್ಷತೆ ಮೆರೆಯಲು ಸಾಧ್ಯವಿಲ್ಲ ಸಮಾಜ ಘಾತುಕ ಚಟುವಟಿಕೆಗಳು ಕಂಡುಬಂದಲಿ ಪೋಲೀಸರಿಗೆ ಮಾಹಿತಿನೀಡಿ ಕೈಜೋಡಿಸಬೇಕಾದದ್ದು ಜನತೆಯ ಕರ್ತವ್ಯ
ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು.

ಮಾದಕ ವಸ್ತು ಮಾರಾಟ ಮತ್ತು ಸೇವನೆ ನಮ್ಮನ್ನು ಅಡ್ಡದಾರಿಗೆ ಎಳೆಯುತ್ತದೆ.ಕಾಲೇಜು ಪರಿಸರದಲ್ಲಿ ಇಂಥ ಚಟುವಟಿಕೆಗಳು ಕೆಲವೆಡೆ ಕಂಡು ಬರುತ್ತಿವೆ.ಪೋಲೀಸ್ ಇಲಾಖೆ ಇವುಗಳ ಮೇಲೆ ತೀವ್ರ ನಿಗಾವಹಿಸುತ್ತಿದೆ. ಅಂತವರನ್ನು ಕಾನೂನಿನ ಅಡಿಯಲ್ಲಿ ಮಟ್ಟ ಹಾಕಲಾಗುತ್ತದೆ.ಅಪರಾಧಿಕ ಚಟುವಟಿಕೆ ನಡೆದ ಸ್ಥಳದಲ್ಲಿ ಉಪಸ್ಥಿತರಿರುವವರೂ ಅದರ ಪಾಲನ್ನು ಪಡೆಯಬೇಕಾಗುತ್ತದೆ.ಅವುಗಳಿಗೆ ಪ್ರೋತ್ಸಾಹ ನೀಡುವುದೂ ಶಿಕ್ಷಾರ್ಹ ಅಪರಾಧ ಆಗುತ್ತದೆ.


ಇಂದಿನ ದಿನಗಳಲ್ಲಿ ಮೊಬೈಲ್ ಮೂಲಕ ಯುವಜನತೆ ಅನೇಕ ಅಪರಾಧಗಳನ್ನು ಎಸಗಿ ಸಿಲುಕಿಕೊಳ್ಳುತ್ತಿದೆ,ಅಶ್ಲೀಲ ಸಂದೇಶಗಳನ್ನು ,ದೃಶ್ಯಗಳನ್ನು ರವಾನಿಸಿದರೆ ಅದನ್ನು ಸಂಪೂರ್ಣವಾಗಿ ಅಳಿಸಲಾಗುವುದಿಲ್ಲ ನಿಮ್ಮ ಮೊಬೈಲ್ ಮೂಲಕ ಡಿಲೀಟ್ ಮಾಡಿದರೂ ಅದರ ನಿಖರ ಮಾಹಿತಿ ಸಂಗ್ರಹವಾಗಿ ಪೋಲೀಸರ ತನಿಖೆಗೆ ದೊರೆಯುತ್ತದೆ ಕಾರಣ ಇಂಥಹ ಹುಚ್ಚುಸಾಹಸ ಯಾರೂ ಮಾಡಬಾರದು.
ಪರವಾನಿಗೆ ಇಲ್ಲದ ವಾಹನ ಚಲಾವಣೆ ಅಪರಾಧವಾಗಿದೆ.ಹೆಲ್ಮೆಟ್ ರಹಿತ ಚಾಲನೆಯಿಂದ ಉಂಟಾದ ಅಪಘಾತದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ.
ಸುರಕ್ಷತಾ ಕ್ರಮಗಳ ಬಗ್ಗೆ ನಿಗಾಹಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಕಿರಣ್ ಭಟ್ಟ ವಹಿಸಿದ್ದರು.ಉಪಪ್ರಾಚಾರ್ಯರಾದ ಸುಜಾತಾ ಹೆಗಡೆ ,ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕಿ ಲತಾ ಮೇಸ್ತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕನ್ನಡ ಉಪನ್ಯಾಸಕರಾದ ಕಾಗಾಲ ಚಿದಾನಂದ ಭಂಡಾರಿ ವಂದನಾರ್ಪಣೆ ಗೈದರು.

ವರದಿ.ಕಾಗಾಲ ಚಿದಾನಂದ ಭಂಡಾರಿ.

Comments

Leave a Reply

Your email address will not be published. Required fields are marked *