ಕಾರವಾರ: ಕಾರೊಂದು ರಸ್ತೆಯಂಚಿನ ಕಾಲುವೆಗೆ ಬಿದ್ದು ಐವರು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 66ರ ಮರೈನ್ ಬಯೋಲಜಿ ಕಾಲೇಜಿನ ಬಳಿ ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಮಂಗಳೂರು ಮೂಲದ ರಾಕೇಶ್ ಕಿಣಿ ಎಂಬುವವರ ಕಾರು ಅಪಘಾತಕ್ಕೊಳಗಾಗಿದ್ದು, ಕಾರಿನಲ್ಲಿದ್ದ ಅವರ ತಂದೆ ಅಮೃತ್ ಕಿಣಿ, ತಾಯಿ ಶಾಲಿನಿ ಕಿಣಿ, ಪತ್ನಿ ದೀಪಾ ಕಿಣಿ ಹಾಗೂ ಮಗಳು ರಿಧಿಮಾ ಕಿಣಿ (9 ತಿಂಗಳು) ಗಾಯಗೊಂಡಿದ್ದಾರೆ. ಕಾರು ಅಪಘಾತ ನಡೆದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಪಶ್ಚಿಮ ಬಂಗಾಳ ಮೂಲದ ಹಬ್ಬುವಾಡ ನಿವಾಸಿ ರವಿ ಮಂಡಿ ಹಾಗೂ ಬಾಬುರಾಮ್ ಮುರ್ಮು ಎಂಬುವವರಿಗೂ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಕಾರು ಚಾಲಕ ಅಂಕೋಲಾ ಮಾರ್ಗದಿಂದ ಸದಾಶಿವಗಡದತ್ತ ತೆರಳಲು ಮಧ್ಯಾಹ್ನದ ವೇಳೆಗೆ ಸರ್ವಿಸ್ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದು, ಹೆದ್ದಾರಿಯಲ್ಲಿ ಸಾಗಲು ಇಲ್ಲಿನ ಜಿ.ಕೆ.ರಾಮ್ ಬಿಲ್ಡಿಂಗ್ ಬಳಿ ಬಲಕ್ಕೆ ತಿರುಗಿಸಬೇಕಾಗಿತ್ತು. ಆದರೆ ಚಾಲಕ ನಿಯಂತ್ರಣ ತಪ್ಪಿ ಎಡಕ್ಕೆ ತಿರುಗಿಸಿದ ಪರಿಣಾಮ ಸ್ಥಳದಲ್ಲಿ ಚರಂಡಿ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಯಲ್ಲಿ ಕಾರು ಅಡ್ಡಲಾಗಿ ಬಿದ್ದಿದೆ. ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.