ಕಾರವಾರ: ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯವನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು, ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಗೋವಾ,ಕರ್ನಾಟಕ ಮದ್ಯ ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಕೆಎಸ್‌ಬಿಸಿಎಲ್‌ಗೆ ಲಾರಿಯಲ್ಲಿ 400 ಬಾಕ್ಸ್ ಪರವಾನಗಿ ಹೊಂದಿದ್ದ ಮದ್ಯವನ್ನು ಗೋವಾದಿಂದ ಸಾಗಿಸುವ ಸಮಯದಲ್ಲಿ 9 ಬಾಕ್ಸ್ ಗೋವಾ ಮದ್ಯವನ್ನು ಪರವಾನಗಿ ಇಲ್ಲದೆನೇ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ವನಜಾಕ್ಷಿ ಅವರ ನೇತೃತ್ವದಲ್ಲಿ ಅಬಕಾರಿ ಅಧಿಕಾರಿಗಳ ತಂಡ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಲಾರಿಯನ್ನು ತಪಾಸಣೆ ನಡೆಸಿ ಜಪ್ತಿ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಲಾರಿಯಲ್ಲಿ 400 ಬಾಕ್ಸ್ ಗಳಲ್ಲಿ 1.17 ಕೋಟಿ ಮೌಲ್ಯದ 4,800 ಬಾಟಲ್ ಕರ್ನಾಟಕ ಮದ್ಯ, 9 ಬಾಕ್ಸ್‌ಗಳಲ್ಲಿ 29 ಸಾವಿರ ಮೌಲ್ಯದ 108 ಬಾಟಲ್ ಗೋವಾ ಮದ್ಯ ಪತ್ತೆಯಾಗಿದೆ. ಒಟ್ಟು 1,17,85,944 ರೂಪಾಯಿ ಮೌಲ್ಯದ 3681 ಲೀಟರ್ ಮದ್ಯ ಜಪ್ತಿಪಡಿಸಿಕೊಳ್ಳಲಾಗಿದ್ದು, ಮದ್ಯ ಸಾಗಾಟಕ್ಕೆ ಬಳಸಿದ್ದ 19.50 ಲಕ್ಷ ಮೌಲ್ಯದ ವಾಹನ ಸೇರಿ ಒಟ್ಟು 1.37 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದಂತಾಗಿದೆ. ಲಾರಿ ಚಾಲಕ ನರಸಿಂಹರಾಜು ಎಲ್.ಡಿ.ಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.