ಬೆಂಗಳೂರು: ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಹೊರ ದೇಶಗಳಿಂದ ಬರುವ ಪ್ರಯಾಣಿಕರನ್ನು 7 ದಿನ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಜತೆಗೆ, ಕೋವಿಡ್ ಸ್ಯಾಂಪಲ್ಸ್ ತೆಗೆದುಕೊಂಡು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲು ಮುಂದಾಗಿದೆ. ಕೆಲವು ದೇಶಗಳಲ್ಲಿ ಕೋವಿಡ್ ಕ್ರಮಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕ ಪತ್ತೆಗೆ ಆದ್ಯತೆ ನೀಡಬೇಕು ಎಂದುತಿಳಿಸಲಾಗಿದೆ.
ಚೀನಾ, ಹಾಂಗ್‌ಕಾಂಗ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ್, ಥೈಲ್ಯಾಂಡ್ ದೇಶಗಳಿಂದ ಬರುವ ಪ್ರತಿ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಬೆಂಗಳೂರಿಗೆ ಪ್ರವೇಶಿಸುವ ವಿದೇಶಿ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕು. ಕ್ವಾರಂಟೈನ್ ಸಮಯದಲ್ಲಿ ಜ್ವರ, ಕೆಮ್ಮು, ಶೀತ, ತಲೆ ನೋವು, ಅತಿಸಾರ ಮತ್ತು ಉಸಿರಾಟದ ತೊಂದರೆ ಜತೆಗೆ ರುಚಿ ಇಲ್ಲದಿರುವುದು, ವಾಸನೆ ಬರದೆ ಇರುವ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕೆಂದು ಸೂಚಿಸಲಾಗಿದೆ.