ಗೋಕರ್ಣ: ಕುದುರೆ ಸವಾರಿ ನಮ್ಮ ಜೀವನಕ್ಕೆ ಆತ್ಮವಿಶ್ವಾಸ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕುದುರೆ ಸವಾರಿಯಲ್ಲಿ ವೇಗ ಎಷ್ಟು ಮುಖ್ಯವೋ ನಿಯಂತ್ರಣ ಹಾಗೂ ಪ್ರೀತಿ ಕೂಡಾ ಅಷ್ಟೇ ಮುಖ್ಯ. ಇವು ನಮ್ಮ ಬದುಕಿಗೆ ಮಾರ್ಗದರ್ಶಿ ತತ್ವಗಳೂ ಆಗಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಭಿವೃದ್ಧಿಪಡಿಸಿರುವ ಅಶ್ವಶಾಲೆ ‘ಪದಲಯ’ ಲೋಕಾರ್ಪಣೆ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಬದುಕು ಕೂಡಾ ಒಂದು ಕುದುರೆ ಇದ್ದಂತೆ. ಆ ಕುದುರೆಯನ್ನು ಏರಿ ಸವಾರಿ ಮಾಡಬೇಕು. ಅದಕ್ಕೆ ಸೂಕ್ತ ತಯಾರಿ ಇಲ್ಲದಿದ್ದರೆ ಪತನವಾಗುತ್ತದೆ. ಆ ಆತ್ಮವಿಶ್ವಾಸವನ್ನು ಕುದುರೆ ಸವಾರಿ ನಮಗೆ ನೀಡುತ್ತದೆ. ಜೀವನವನ್ನು ಪ್ರೀತಿ ಮಾಡುವ ಮಹತ್ವವನ್ನೂ ಇದು ಕಲಿಸಿಕೊಡುತ್ತದೆ ಎಂದು ಬಣ್ಣಿಸಿದರು. ಜೀವನವನ್ನು ಕೂಡಾ ಪ್ರೀತಿಯಿಂದ ನಿಯಂತ್ರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಾರ್ಮಿಕವಾಗಿ ನುಡಿದರು.
ವಿವಿವಿ ಪರಿಪೂರ್ಣತೆಯ ಕಡೆಗೆ ದಾಪುಗಾಲಿಡುತ್ತಿದೆ. ವಿದ್ಯಾರ್ಥಿಗಳಿಗೆ ಅಶ್ವಾರೋಹಣ ಬೋಧಿಸುವ ಸಲುವಾಗಿ ಅಭಿವೃದ್ಧಿಪಡಿಸಲಾದ ಅಶ್ವಶಾಲೆ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಎಂದು ಹೇಳಿದರು.
ಕುದುರೆಯ ಚಲನೆ ಲಯಬದ್ಧವಾಗಿರುತ್ತದೆ. ಸಂಗೀತ, ನೃತ್ಯದಂತೆ ಅಶ್ವಾರೋಹ ಕೂಡಾ ಒಂದು ಅಪೂರ್ವ ವಿದ್ಯೆ. ನೃತ್ಯಕ್ಕೆ ಲಯ ಮುಖ್ಯ; ಆದರೆ ಕುದುರೆಗಳಿಗೆ ಸಹಜವಾಗಿಯೇ ಈ ಲಯ ಇರುತ್ತದೆ. ಅಶ್ವಗಳ ಕುರಿತ ಈ ಅಪೂರ್ವ ವಿಜ್ಞಾನವನ್ನು ಮಕ್ಕಳಿಗೆ ಕಲಿಸುವುದು ಉದ್ದೇಶ ಎಂದು ಸ್ಪಷ್ಟಪಡಿಸಿದರು.
ನಮ್ಮ ಪುರಾಣಗಳಲ್ಲಿ ಕಾರ್ಯವೀರ್ಯಾರ್ಜುನ, ಲಕ್ಷ್ಮಣ, ನಳ ಚಕ್ರವರ್ತಿಯಂಥ ಅಪೂರ್ವ ಅಶ್ವಾರೋಹಿಗಳು ಕಾಣಸಿಗುತ್ತಾರೆ. ಅಶ್ವಾರೋಹದಲ್ಲಿ ವೇಗ ಹಾಗೂ ಕುದುರೆಯ ನಿಯಂತ್ರಣ ಎರಡೂ ಮುಖ್ಯ. ವೇಗಕ್ಕೆ ದಿಕ್ಕು ನೀಡಿದಾಗ ಗುರಿ ತಲುಪಲು ಸಾಧ್ಯ. ಅಶ್ವಗಳಿಗೆ ಪ್ರೀತಿ ಕೂಡಾ ಅತ್ಯಂತ ಮುಖ್ಯ. ಪ್ರೀತಿಯಿಂದ ನಿಯಂತ್ರಿಸಬೇಕು. ನಮ್ಮ ಇಚ್ಛೆ ಪ್ರಕಾರ ಕುದುರೆಯನ್ನು ಓಡಿಸುವ ಕಲೆಯೇ ಅಶ್ವಾರೋಹ ಎಂದು ವಿಶ್ಲೇಷಿಸಿದರು.
ಜಗತ್ತಿನ ಯಾವುದೇ ವಾಹನಗಳಿಗಿಂತ ಹೆಚ್ಚು ಬೆಲೆ ಬಾಳುವಂಥದ್ದು ಕುದುರೆ. ಅದಕ್ಕೆ ಹಣದಿಂದ ಬೆಲೆ ಕಟ್ಟಲಾಗದು. ಅದು ಅಮೂಲ್ಯ. ಇದನ್ನು ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ವಿಶ್ವವಿದ್ಯಾಪೀಠಕ್ಕೆ ಗೋವುಗಳು ಕಣ್ಣಿದ್ದಂತೆ; ಅಶ್ವಶಾಲೆ ಕಾಲುಗಳಿದ್ದಂತೆ. ನಮ್ಮ ಚಲನೆಯ ಸಂಕೇತ ಎಂದರು.
ವಿದ್ಯಾರ್ಥಿಗಳು ಈ ಅಶ್ವಶಾಲೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಪ್ರಕೃತಿಯ ಬಗ್ಗೆ, ನೆಲ- ಜಲ, ಪ್ರಾಣಿ- ಪಕ್ಷಿಗಳು ಹೀಗೆ ಪ್ರತಿಯೊಂದರ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಿ ಎಂದು ಸಲಹೆ ಮಾಡಿದರು.
ಕರ್ನಾಟಕ ಇಂಡೀಜೀನಿಯಸ್ ಹಾರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಲಕ್ಷ್ಮೀಕಾಂತರಾಜ್ ಅರಸ್, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಮೇಖಲಾ ಕಾಗ್ಲಿ ಕೆ, ಖಜಾಂಚಿ ಎಂ.ಅಶ್ವಿನ್, ಕಾನೂನು ವಿಭಾಗದ ಸಚಿನ್ ಎಸ್.ಈರೇಶನವರ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವ್ಯವಸ್ಥಾಪಕ ಮನು, ರವಿಶಂಕರ್ ಕಡತೋಕ ಮತ್ತಿತರರು ಉಪಸ್ಥಿತರಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲದ ವಿದ್ಯಾರ್ಥಿಗಳಿಗೆ ಕುದುರೆ ಸವಾರಿ ಅಭ್ಯಾಸಕ್ಕಾಗಿ (ಅಶ್ವಾರೋಹ) ಈ ಅಶ್ವಶಾಲೆ ಅಭಿವೃದ್ಧಿಪಡಿಸಲಾಗಿದೆ.