ಹೊನ್ನಾವರ: ದೇವಾಲಯದ ಕಾಣಿಕೆ ಹುಂಡಿಯನ್ನು ಕದ್ದೊಯ್ಯುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಹೊದ್ಕೆ-ಶಿರೂರಿನಲ್ಲಿ ನಡೆದಿದೆ.
ಹರಿಯಾಣ ರಾಜ್ಯದ ಮೈತಾ (38) ಕಾಣಿಕೆ ಹುಂಡಿಯನ್ನು ಕದ್ದೊಯ್ದ ವ್ಯಕ್ತಿ. ಈತ ಕುಮಟಾ ತಾಲೂಕಿನ ದಿವಳ್ಳಿಯ ದೇವಾಲಯವೊಂದರ ಕಾಣಿಕೆ ಹುಂಡಿಯನ್ನು ರಾತ್ರಿ ವೇಳೆಯಲ್ಲಿ ಕದ್ದೊಯ್ದಿದ್ದ. ಬುಧವಾರ ಬೆಳಿಗ್ಗೆ ತಾಲೂಕಿನ ಹೊದ್ಕೆಯ ರಸ್ತೆಯಲ್ಲಿ ಕಾಣಿಕೆ ಹುಂಡಿಯನ್ನು ಬಚ್ಚಿಟ್ಟುಕೊಂಡು ಹೋಗುತ್ತಿರುವಾಗ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಪ್ರಶ್ನಿಸಲು ಮುಂದಾದಾಗ ಆತ ಕಾಣಿಕೆ ಡಬ್ಬಿ ಹೊತ್ತೊಯ್ದು ಓಡಿಹೋಗಲು ಯತ್ನಸಿದ್ದಾನೆ. ಆಗ ಸಾರ್ವಜನಿಕರು ಕಳ್ಳನನ್ನು ಹಿಡಿದು ಹೊನ್ನಾವರ ಠಾಣೆಗೆ ಮಾಹಿತಿ ನೀಡಿದ್ದಾರೆ.
ನಂತರ ಶಿರೂರಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆವರಣಕ್ಕೆ ಕರೆತಂದ ಸಾರ್ವಜನಿಕರು ಕಳ್ಳನನ್ನು ವಿಚಾರಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳನನ್ನು ವಿಚಾರಣೆಗೊಳಪಡಿಸಿದ್ದು, ದೇವಾಲಯದ ಕಾಣಿಕೆ ಹುಂಡಿಯನ್ನು ಕದ್ದೊಯ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.