ಕುಮಟಾ: ಇಂದಿನ ಶರವೇಗದ ಯುಗದಲ್ಲಿ ಉತ್ತಮ ಅಭಿರುಚಿಯ ಓದುಗರು, ವೀಕ್ಷಕರು ಕಡಿಮೆಯಾಗುವತ್ತಿರುವ ಸಂದರ್ಭದಲ್ಲಿ ಹಣತೆಗೆ ಬೌದ್ಧಿಕ ಬೆಳಕು ಹಚ್ಚುವ ಜವಾಬ್ದಾರಿ ಇದೆ. ಭಾಷೆ ಮತ್ತು ಸಂಸ್ಕೃತಿ ಉಳಿಸುವಲ್ಲಿ ಹಣತೆಯಂಥ ಸಂಘಟನೆಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹೆಸರಾಂತ ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪ್ಟರು.

ಇಲ್ಲಿಯ ಖಾಸಗಿ ಹೊಟೆಲ್ ಸಭಾಭವನದಲ್ಲಿ ನಡೆದು ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಈ ಸಂಘಟನೆಯ ನೂತನ ಕಾರ್ಯಕಾರಿ ಸಮಿತಿಯ ಕಾರ್ಯಚಟುವಟಿಕೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನಾವಿಂದು ಮಕ್ಕಳಿಗೆ ಶುದ್ಧ ಬಾಷೆ ಮತ್ತು ಸಂಸ್ಕೃತಿಯನ್ನು ಕಲಿಸಬೇಕಾಗಿದೆ. ಒಂದು ಅಧ್ಯಯನದ ಪ್ರಕಾರ ಜಗತ್ತಿನ ೨೦೦ ಭಾಷೆಗಳ ಕೆಲವೇ ವರ್ಷಗಳಲ್ಲಿ ಸಾಯುತ್ತವೆ ಎಂದು ಹೇಳುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಣತೆಯಂಥ ಸಂಘಟನೆಗಳ ಕನ್ನಡದ ಕೆಲಸಗಳನ್ನು ನೋಡಿದರೆ ನಮ್ಮ ಭಾಷೆಗೆ ಆಪತ್ತು ಇಲ್ಲ ಎಂದು ಭರವಸೆ ಮೂಡಿಸುತ್ತದೆ ಎಂದು ನುಡಿದರು.

RELATED ARTICLES  ಅಪಘಾತ : ಡಿವೈಡರ್ ಗೆ ಬಡಿದು ವ್ಯಕ್ತಿ ಸಾವು


ನಾಡು ನುಡಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಹಣತೆ ಪ್ರಜ್ವಲವಾಗಿ ಬೆಳಗಲಿ, ಜಗಲಿ ಶ್ರೀಮಂತವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಕಥೆಗಾರ ಶ್ರೀಧರ ಬಳಗಾರ ‘ನಾವಿಂದು ಚರಿತ್ರೆಯ ಬೆನ್ನುಹತ್ತಿ ಸ್ವಾಸ್ಥö್ಯ ಕೆಡಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ ನಮಗೆ ನಮ್ಮ ನೆನಪುಗಳೇ ಸಂಪತ್ತು. ನೆನಪುಗಳಿಂದಲೇ ಬದುಕು ಮತ್ತು ಸಮಾಜ ಕಟ್ಟಬೇಕಾದದ್ದು ಸದ್ಯದ ತುರ್ತು. ಹಣತೆ ನಾಡಿಗೆ ಬೆಳಕಾಗಲಿ’ ಎಂದರು.


ಅಧ್ಯಕ್ಷತೆ ವಹಿಸಿದ್ದ ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ‘ಸಮಾಜದ ಎಲ್ಲ ಸ್ತರದ ಭಾವನೆ ಮತ್ತು ಬೆವರಿನ ಪ್ರತೀಕವೇ ಹಣತೆ. ಎಲ್ಲರಿಂದ ಎಲ್ಲರಿಗಾಗಿ ಜಿಲ್ಲೆಯಾದ್ಯಂತ ಬೆಳಕು ಚೆಲ್ಲುವ ಬದ್ಧತೆ ಈ ಹಣತೆಗೆ ಇದೆ. ಇಪ್ಪತ್ತು ವರ್ಷದ ಹಿಂದೆ ಹಚ್ಚಿದ ಹಣತೆ ಅನುದಿನ ಬೆಳಗಲು ಎಲ್ಲರ ಸಹಕಾರ ಮುಖ್ಯ’ ಎಂದರು.

RELATED ARTICLES  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ಅಶೋಕ ಪ್ರಭು. : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಕಾರ್ಯಕ್ರಮ.


ವೇದಿಕೆಯಲ್ಲಿ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಿಗೆ ಕಾರ್ಯಚಟುವಟಿಕೆ ನಡೆಸಲು ಪರಿಕರಗಳನ್ನು ನೀಡಲಾಯಿತು.


ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಹೆಗೆಡೆ ಅಪಗಾಲ ಹಣತೆ ಹಿನ್ನೋಟದ ಬಗ್ಗೆ ಮೆಲಕು ಹಾಕಿದರೆ, ಪ್ರಧಾನ ಸಂಚಾಲಕ ಹಣತೆ ಮುನ್ನೋಟದ ಬಗ್ಗೆ ಮಾತನಾಡಿದರು. ಗೌರವ ಕೋಶಾಧ್ಯಕ್ಷ ಆಶಯ ಗೀತೆ ಹಾಡಿದರು. ಕುಮಟಾ ಘಟಕದ ಅಧ್ಯಕ್ಷ ಪ್ರಕಾಶ ನಾಯ್ಕ ಸ್ವಾಗತಿಸಿದರು. ಉಪೇಂದ್ರ ಘೋರ್ಪಡೆ, ಕಮಲಾ ಕೊಂಡದಕುಳಿ ಅತಿಥಿಗಳನ್ನು ಪರಿಚಯಿಸಿದರು. ಹೊನ್ನಾವರ ಘಟಕದ ಅಧ್ಯಕ್ಷ ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಉದಯ ಮಡಿವಾಳ ವಂದಿಸಿದರು.