ಕುಮಟಾ : ಭತ್ತದ ಬಣವೆಗೆ ಬೆಂಕಿ ತಗಲಿ ಬೆಳೆಗಳು ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಹೆಗಡೆಯ ಕಳ್ಕೊಡ ರಸ್ತೆಯ ಶ್ರೀಕೃಷ್ಣ ದೇವಸ್ಥಾನ ಎದುರಿನ ಗದ್ದೆಯಲ್ಲಿ ನಡೆದಿದೆ. ಹೆಗಡೆ ಗ್ರಾಮದ ರೈತ ಶೇಷಗಿರಿ ವೆಂಕಟ್ರಮಣ ನಾಯ್ಕ ಎಂಬುವವರು ತಾವು ಬೆಳೆದ ಭತ್ತದ ಪೈರನ್ನು ಗದ್ದೆಯಲ್ಲಿ ಬಣವೆ ಹಾಕಿದ್ದರು. ಬಣವೆಯ ಮೇಲ್ಬಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು ಎರಡು ಹಕ್ಕಿಗಳು ಕಚ್ಚಾಡಿ ಅದರ ರೆಕ್ಕೆ ಭಾಗಕ್ಕೆ ಬೆಂಕಿ ತಗುಲಿ ಅದು ತುಂಡಾಗಿ ಒಂದು ಬಣವೆಯ ಮೇಲೆ ಬಿದ್ದು ಬೆಂಕಿ ತಗುಲಿದೆ ಎನ್ನಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಬಣವೆಗಳು ಸಂಪೂರ್ಣ ಭಸ್ಮವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅಗ್ನಿ ಶಾಮಕ ದಳವು ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಬೆಂಕಿ ಗದ್ದೆಗಳಿಗೆ ಹರಡದಂತೆ ಎಚ್ಚರ ವಹಿಸಿದೆ. ಗ್ರಾಮ ಲೆಕ್ಕಾಧಿಕಾರಿ ವಿನೋದರಾವ್ ಸ್ಥಳಕ್ಕೆ ಭೇಟಿ ನೀಡಿ ಸುಮಾರು 30 ಸಾವಿರ ಹಾನಿ ಸಂಭವಿಸಿರುವವುದಾಗಿ ಅಂದಾಜಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಗಡೆ ಗ್ರಾಪಂ ಪಿಡಿಒ ವೆಂಕಟ್ರಮಣ ಪಟಗಾರ, ಗ್ರಾಪಂ ಸದಸ್ಯರಾದ ಬಿ ಜಿ ಶಾನಭಾಗ, ರಾಮಚಂದ್ರ ಪಟಗಾರ, ವಿದ್ಯಾ ಗೌಡ, ಆನಂದು ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ನಂದಿಸಲು ಸ್ಥಳೀಯರಾದ ಮೋಹನ ಶಾನಭಾಗ, ಅಮರನಾಥ ಭಟ್ಟ, ಪ್ರಸನ್ನ ನಾಯ್ಕ ಕಲೊಡ ಇತರೆ ಗ್ರಾಮಸ್ಥರು ಸಹಕರಿಸಿದರು.