ಭಟ್ಕಳ: ತಾಲೂಕಿನ ಬಹುಮುಖ ಪ್ರತಿಭೆಯ ಸಾಹಿತಿ, ಕವಿ, ಅಂಕಣಕಾರ ಹಾಗೂ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಇವರು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಜನವರಿ 6, 7 ಮತ್ತು 8ರಂದು ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡುವಂತೆ ಕೋರಿ, ಅವರಿಗೆ ಕಸಾಪ ರಾಜ್ಯಾಧ್ಯಕ್ಷರಾದ ಮಹೇಶ ಜೋಷಿಯವರು ಪತ್ರ ಬರೆದಿದ್ದಾರೆ. ಜಾಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿರುವ ಇವರ ಸಾಕಷ್ಟು ಕವಿತೆ ಮತ್ತು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ರಾಜ್ಯದ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಎರಡು ಬಾರಿ ಬೆಂಗಳೂರಿನ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ಯಿಂದ ಇವರು ಗೌರವಿಸಲ್ಪಟ್ಟಿದ್ದಾರೆ.
ಭಟ್ಕಳ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪುರಸ್ಕೃತರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ತಮ್ಮ ‘ಹಸಿವು ಸಾಯುವುದಿಲ್ಲ’, ‘ಬೇಲಿಯ ಹೂವು’, ‘ಬೆರಳ ಸಂಧಿಯಿoದ’ ಕವನ ಸಂಕಲನಗಳಿoದ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಇವರು, ಉತ್ತಮ ಕಾರ್ಯಕ್ರಮ ನಿರೂಪಕರೂ ಮತ್ತು ಚಿತ್ರ ಕಲಾವಿದರೂ ಆಗಿದ್ದಾರೆ. ಇತ್ತೀಚೆಗೆ ತಮ್ಮ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಧಾರವಾಡದ ‘ಡಾ.ಎಚ್.ಎಫ್ ಕಟ್ಟೀಮನಿ ಪ್ರತಿಷ್ಠಾನದ’ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇವರ ಈ ಸಾಧನೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ, ಕಾರ್ಯದರ್ಶಿ ಪಿ.ಆರ್.ನಾಯ್ಕ, ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಹಿರಿಯ ಸಾಹಿತಿಗಳಾದ ಡಾ.ಸೈಯದ್ ಜಮೀರುಲ್ಲಾ ಷರೀಫ್, ಡಾ.ಆರ್.ವಿ.ಸರಾಫ್, ಜಾಲಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶಾರದಾ ನಾಯ್ಕ ಮತ್ತು ಸಹಶಿಕ್ಷಕರು ಹಾಗೂ ಇತರೆ ಸಂಘ- ಸಂಸ್ಥೆಗಳ ಗಣ್ಯರು ಮತ್ತು ಸಾಹಿತಿಗಳು ಅಭಿನಂದಿಸಿದ್ದಾರೆ.