ಮಂಗಳೂರು : ಕರಾವಳಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗು ತ್ತಿದ್ದು, ಕನಿಷ್ಠ ಉಷ್ಣಾಂಶ ಇಳಿಮುಖ ಗೊಳ್ಳುತ್ತಿದೆ. ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಬೆಳಗ್ಗೆ, ಸಂಜೆ ಶೀತ ಗಾಳಿ ಜತೆಗೆ ಇಬ್ಬನಿ ಬೀಳುತ್ತಿದ್ದು, ಜ್ವರ, ಶೀತ- ಕೆಮ್ಮು, ಗಂಟಲು ನೋವು ಇತ್ಯಾದಿ ಕಾಣಿಸಿಕೊಳ್ಳುತ್ತಿದೆ.
ಅಲರ್ಜಿ, ಅಸ್ತಮಾ ರೋಗಿಗಳು ಮತ್ತಷ್ಟು ಎಚ್ಚರ ವಹಿಸಬೇಕಾದ ಆವಶ್ಯಕತೆ ಇದೆ. ಚಳಿಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಿದೆ. ಐಸ್‌ಕ್ರೀಂ ಸಹಿತ ತಂಪು ಆಹಾರ ದಿಂದ ದೂರ ಇರುವುದು, ಕರಿದ ಪದಾರ್ಥಗಳನ್ನು ಹೆಚ್ಚು ಬಳಸದೇ ಇರುವುದು ಸೂಕ್ತ.
ಜಿಲ್ಲೆಯಲ್ಲಿ ಎಚ್1 ಎನ್1, ಮಲೇರಿಯಾಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗಿದೆ. ಒಂದು ವೇಳೆ ಮಕ್ಕಳಲ್ಲಿ ವೈರಾಣು ಜ್ವರ ಕಾಣಿಸಿಕೊಂಡರೆ ಶಾಲೆಗೆ ಕಳುಹಿಸ ಬಾರದು. ಜ್ವರ ಇದ್ದವರು ಕರವಸ್ತ್ರ, ಟವೆಲ್ ಬಳಸಿ ರೋಗಾಣು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂಬುದು ವೈದ್ಯರ ಸಲಹೆ ನೀಡಿದ್ದಾರೆ.