ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆಯುತ್ತಿರುವ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಶನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಖ್ಯಾತ ರೇಸರ್ ಕೆಇ ಕುಮಾರ ಅವರು ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ನಡೆದ ಸೆಲೂನ್ ಕಾರ್ ರೇಸ್ ವೇಳೆ 59 ವರ್ಷದ ಕೆಇ ಕುಮಾರ ಕಾರಿಗೆ ಮತ್ತೊಂದು ಕಾರು ಅಡ್ಡ ಬಂದಿದ್ದರಿಂದ ಕಾರು ಟ್ರ್ಯಾಕ್ ನಲ್ಲಿ ಸ್ಕಿಡ್ ಆಗಿ ಬೇಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕುಮಾರ ಅವರನ್ನು ನಜ್ಜುಗುಜ್ಜಾಗಿದ್ದ ಕಾರಿನಿಂದ ಹೊರತೆಗೆದು ಟ್ರ್ಯಾಕ್‌ನ ವೈದ್ಯಕೀಯ ಕೇಂದ್ರದಲ್ಲಿ ಪ್ರಾಥಮಿಕ ತಪಾಸಣೆ ನಡೆಸಿದ ನಂತರ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ.
ಅಧ್ಯಕ್ಷ ವಿಕ್ಕಿ ಚಾಂಧೋಕ್ ಅವರು, ‘ಇದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ ಅವರು ಓರ್ವ ಅನುಭವಿ ರೇಸರ್ ಆಗಿದ್ದರು. ನಾನು ಅವರನ್ನು ಹಲವು ದಶಕಗಳಿಂದ ಸ್ನೇಹಿತ ಮತ್ತು ಸ್ಪರ್ಧಿ ಎಂದು ತಿಳಿದಿದ್ದೇನೆ. MMSC ಮತ್ತು ಇಡೀ ರೇಸಿಂಗ್ ಸಹೋದರರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಹಾಗೂ ಅವರಿಗೆ ಗೌರವ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.