ಕುಮಟಾ : ಚಿಕ್ಕ ಮಕ್ಕಳಿಗೆ ಮನೆ ಪಾಠದ ಜೊತೆಗೆ ನಮ್ಮ ಸಂಸ್ಕಾರ ತಿಳಿಸುವ ಕಾರ್ಯ ಇಂದಿನ ಅಗತ್ಯತೆಯಾಗಿದ್ದು ಈ ಕಾರ್ಯವನ್ನು ‘ಸೇವಾ ಭಾರತಿ ಟ್ರಸ್ಟ್’ ತನ್ನ ಆರೆಂಟು ಕೇಂದ್ರಗಳ ಮೂಲಕ ಕುಮಟಾದ ವಿವಿಧೆಡೆ ಕೆಲ ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದ್ದು ಅತ್ಯಂತ ಶ್ಲಾಘನೀಯ.ಹೆಚ್ಚಿನ ಮಕ್ಕಳು ಈ ಸೌಲಭ್ಯದ ಸದುಪಯೋಗಪಡಿಸಿಕೊಳ್ಳುವಂತಾಗಲು ಪಾಲಕರ ಸಹಕಾರ ಅತಿ ಮುಖ್ಯ ಎಂದು ಶಿಕ್ಷಕಿ ಶ್ರೀಮತಿ ಶೈಲಾ ಆರ್.ಗುನಗಿ ಅವರು ಅಭಿಪ್ರಾಯಿಸಿದರು.
ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರೀ ಸಭಾಭವನದಲ್ಲಿ ರವಿವಾರ ನಡೆದ ಉಚಿತ ಮನೆ ಪಾಠ ಮತ್ತು ಸಂಸ್ಕಾರ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದ ಅಶ್ವಿನ್ ಭಟ್ಟ ರವರು ವಿದ್ಯಾ ವಿಕಾಸ ಪ್ರಕಲ್ಪ ಮತ್ತು ಸೇವಾ ಭಾರತಿ ಟ್ರಸ್ಟ್ ನ ಉದ್ದೇಶ ಹಾಗೂ ಹಮ್ಮಿಕೊಳ್ಳುತ್ತಿರುವ ಸಮಾಜೋಪಕಾರೀ ಕಾರ್ಯಾಚಟುವಟಿಕೆಗಳ ಕುರಿತು ವಿವರಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ವಿದ್ಯಾ ವಿಕಾಸ ಪ್ರಕಲ್ಪ ಕುಮಟಾದ ಅಧ್ಯಕ್ಷ ಶಂಕರ ನಾಯ್ಕ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಉಚಿತ ಮನೆ ಪಾಠ ಕೇಂದ್ರದ ಮಕ್ಕಳು ‘ಮಾತೃವಂದನ’ ಕಾರ್ಯ ನೆರವೇರಿಸಿದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಉಚಿತ ಮನೆ ಪಾಠ ಕೇಂದ್ರದ ಶಿಕ್ಷಕರು,ಮಕ್ಕಳು, ಪಾಲಕರು ಉತ್ಸಾಹದಿಂದ ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಧನಂಜಯ ಅವಧಾನಿ ವರದಿ ವಾಚಿಸಿದರು. ದೀಪಾ ಗುನುಗ ನಿರೂಪಿಸಿದರು. ಮಾತೃಶ್ರೀ ಶಿಕ್ಷಕಿ ಇಂದಿರಾ ಜಲ್ಲಿಕಟ್ಟು ವಂದಿಸಿದರು.