ಅಂಕೋಲಾ: ತಾಲೂಕಿನ ಪಾಯಿಂಟ್ ಔಟ್ ಕ್ಯೂ ನೃತ್ಯ ತಂಡ ಮುಂಬೈನಲ್ಲಿ ನಡೆದ ರಾಷ್ಟ್ರ ಮಟ್ಟದ ಇಂಡಿಯನ್ ಹಿಪಾಪ್ ನೃತ್ಯ ಸ್ಪರ್ಧೆಯ 11 ನೇ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕದ ತನ್ನದಾಗಿಸಿಕೊಂಡು ಸಾಧನೆ ಮಾಡಿದೆ. ನಾಲ್ಕು ವಿಭಾಗದಲ್ಲಿ ನಡೆದ ಪ್ರತಿಷ್ಠಿತ ನೃತ್ಯ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಸುಮಾರು ನೂರಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದು ಜ್ಯೂನಿಯರ್ ಮೆಗಾ ವಿಭಾಗದ ಸೆಮಿಫೈನಲ್ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ಮೂಲಕ ಫೈನಲ್ ತಲುಪಿದ ಅಂಕೋಲಾದ ಪಾಯಿಂಟ್ ಔಟ್ ಕ್ಯೂ ತಂಡ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ತೋರುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಭಾರೀ ಪೈಪೋಟಿಯಿಂದ ಕೂಡಿದ ಫೈನಲ್ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಬಂಗಾರದ ಪದಕದಿಂದ ವಂಚಿತರಾದ ಅಂಕೋಲಾ ತಂಡ ಕರ್ನಾಟಕದಿಂದ ಪಾಲ್ಗೊಂಡ 10 ತಂಡಗಳಲ್ಲಿ ಪದಕ ಪಡೆದ ಏಕೈಕ ತಂಡವಾಗಿ ಹೊರಹೊಮ್ಮಿದ್ದು ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಅರ್ಹತೆ ಗಳಿಸಿದೆ. ನೃತ್ಯ ತರಬೇತುದಾರ ಮನೋಜ ಆಚಾರಿ ಅವರ ನೃತ್ಯ ಸಂಯೋಜನೆಯಲ್ಲಿ ತಾಲೂಕಿನ 10 ಜನ ಜ್ಯೂನಿಯರ್ ನೃತ್ಯ ಪಟುಗಳು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಮಕ್ಕಳ ನಿರ್ವಹಣೆ ಅಪಾರ ಜನರ ಪ್ರಶಂಸೆ ವ್ಯಕ್ತವಾಗಿದೆ.