ದಾಂಡೇಲಿ: ‘ಸಮಾನ ಮನಸ್ಕರು ಸೇರಿದಾಗೆಲ್ಲ ಕ್ರಾಂತಿಗಳಾಗಿವೆ. ‘ಹಣತೆ’ ಇಂಥ ಸಮಾನ ಮನಸ್ಕರ ಬಳಗ. ಇದು ಕನ್ನಡಪರ ಸಂಘಟನೆಗಳಿಗೆ ಪ್ರತಿಸ್ಪರ್ಧಿಯೂ ಅಲ್ಲ, ಪರ್ಯಾಯವೂ ಅಲ್ಲ, ಅವೆಲ್ಲವೂಗಳಿಗೆ ಪೂರಕವಾಗಿ ಈ ಜಗಲಿ ಕೆಲಸ ಮಾಡುತ್ತಿರುತ್ತದೆ. ದಾಂಡೇಲಿ ಅಭಯಾರಣ್ಯದಲ್ಲೂ ಈ ಸಂಘಟನೆ ಜನಪರ ಬೆಳಕು ಹರಡಿದೆ’ ಎಂದು ‘ಹಣತೆ’ ಜಿಲ್ಲಾ ಸಮಿತಿ ಸದಸ್ಯ, ಕವಿ ಪ್ರೊ. ನಾಗರಾಜ ಹೆಗಡೆ ಅಪಗಾಲ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿಯ ದಾಂಡೇಲಿ ಘಟಕವನ್ನು ಹಣತೆ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತ ‘ಜಾಗತೀಕರಣ ಸೃಷ್ಟಿಸಿದ ನವವಸಹಾತೀಕರಣದ ಸಂದರ್ಭದಲ್ಲಿ ಸ್ಥಳೀಯ ಸಂಘಟನೆಗಳಿಗೆ ಇಂದು ಬೇಕಾದಷ್ಟು ಕೆಲಸಗಳಿವೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಕೆಲಸಗಳು ಎಂದಿಗೂ ಮುಗಿಯುವಂಥದ್ಧಲ್ಲ, ಅದು ನಿರಂತರ ಆಗುತ್ತಲೇ ಇರಬೇಕು. ಈ ಆಗುವಿಕೆಯ ಕಾಲ, ದೇಶದ ಅಗತ್ಯತೆಗೆ ತಕ್ಕಂತೆ ನಿರಂತರ ಆಗುತ್ತಲೇ ಇರಬೇಕು. ಈ ಆಗುವಿಕೆಯ ರೂಪುರೇಷೆಗಳ ನಿರ್ವಹಣೆ ಸಂಘಟನೆಗಳ ಹೊಣೆಯಾಗಿದೆ. ಹಣತೆಯಿಂದ ಇಂಥ ಹೊಣೆಗಾರಿಕೆಯ ದೀಪವನ್ನು ಹೊತ್ತು ಸಾಗುವ ಕಾರ್ಯವಾಗಬೇಕಿದೆ’ ಎಂದು ನಾಗರಾಜ ಹೆಗಡೆ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ‘ಹಣತೆ’ ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷ ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆ ‘ನಮ್ಮ ಹೊಸ ತಲೆಮಾರು ಅತಿಯಾದ ಮೊಬೈಲ್ ಗೀಳಿನಿಂದ ತಮಗೆ ತಾವೇ ಭಸ್ಮಾಸುರರಾಗುತ್ತಿರುವ ಇಂದಿನ ದಿನಗಳಲ್ಲಿ ಅವರನ್ನೆಲ್ಲ ಸಜ್ಜುಗೊಳಿಸಿ ಸಾಂಸ್ಕೃತಿಕ ಪರಂಪರೆಯನ್ನು ವರ್ತಮಾನದಿಂದ ಭವಿಷ್ಯಕ್ಕೆ ದಾಟಿಸುವ ಕೆಲಸವಾಗಬೇಕಾದ ತುರ್ತು ಇದೆ. ಅದಕ್ಕಾಗಿ ನಗರ ಹಳ್ಳಿ ಅನ್ನದೇ ಶಾಲಾ ಕಾಲೇಜು, ಯುವಕ ಸಂಘಗಳತ್ತ ನಮ್ಮ ಹಣತೆ ಹೊತ್ತೊಯ್ದು ಬೆಳಕು ಹಚ್ಚಬೇಕಾಗಿದೆ. ಈ ಪ್ರಕ್ರಿಯೆ ಇಡೀ ಜಿಲ್ಲೆಯಲ್ಲಿ ಆಗುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹಣತೆ ಹಿಂದು ಮುಸ್ಲಿಂ ಕ್ರೆöÊಸ್ತ ಹೀಗೆ ಸರ್ವ ಸಮುದಾಯದ ಆಸ್ತಿ. ಇದು ಭಾವಕ್ಯದ ಬೆಳಕನ್ನು ಚೆಲ್ಲುತ್ತದೆ. ನಮ್ಮ ಜಗಲಿಯಲ್ಲಿ ದೀಪಾವಳಿ ಕವಿಗೋಷ್ಠಿಯನ್ನೂ, ರಮಜಾನ್ ಕವಿಗೋಷ್ಠಿಯನ್ನೂ, ಕ್ರಿಸ್‌ಮಸ್ ಕವಿಗೋಷ್ಠಿಯನ್ನೂ ಮಾಡಿ ವಿಶ್ವಮಾನ ಸಂದೇಶವನ್ನು ಈ ನೆಲದಲ್ಲಿ ಬಿತ್ತುತ್ತೇವೆ. ಎಲ್ಲರೂ ಮುಂದೆ ಬಂದು ಹಣತೆಗೆ ಎಣ್ಣೆ ಸುರಿಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ದಾಂಡೇಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಅವರಿಗೆ ಬೆಳಗಿದ ಹಣತೆಯನ್ನು ನೀಡಿ ತಾಲೂಕಿನಲ್ಲಿ ಕಾರ್ಯಚಟುವಟಿಕೆ ಮಾಡಲು ಅಧಿಕಾರ ನೀಡಿದರು.
ವೇದಿಕೆಯಲ್ಲಿ ಹಣತೆ ಹಳಿಯಾಳ ಘಟಕದ ಅಧ್ಯಕ್ಷ ರಾಮಕೃಷ್ಣ ಗುನಗ, ಜೊಯಿಡಾ ಘಟಕದ ಅಧ್ಯಕ್ಷ ಅಂತೋನಿ ಜಾನ್ ಉಪಸ್ಥಿತರಿದ್ದರು.
ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಂಡೇಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಸ್ವಾಗತಿಸಿದರು. ಸದಸ್ಯರಾದ ನಾಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರೆಹಮಾನ್ ಅತಿಥಿಗಳನ್ನು ಪರಿಚಯಿಸಿದರು. ಸೋಮಶೇಖರ ಅಂಧಕಾರ ವಂದಿಸಿದರು.