ಹೊನ್ನಾವರ : 2023 ರ ಪ್ರತಿಷ್ಠಿತ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರಖ್ಯಾತ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರಾದ ಶ್ರೀಯುತ ಅನಂತ ನಾಗ್ ಇವರಿಗೆ ನೀಡಲು ಮ0ಡಳಿ ಹಾಗೂ ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ. ಈ ಪ್ರಶಸ್ತಿಯು ರೂ. 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ. ಈ ಪ್ರಶಸ್ತಿಯು ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಸಕಲ ಕಲಾಕ್ಷೇತ್ರಕ್ಕೆ ವಿಸ್ತಾರಗೊಂಡಿದ್ದು, 2004 ರಲ್ಲಿ ಸ್ಥಾಪನೆಯಾಗಿ ಮೊದಲಿಗೆ ಪ್ರಶಸ್ತಿ ಗುರು ಡಾ. ಶ್ರೀಮತಿ ಮಾಯಾರಾವ್ ನಟರಾಜನ್, ಬೆಂಗಳೂರು (ಶಾಸ್ತ್ರೀಯ ನೃತ್ಯ) ಇವರಿಗೆ ನೀಡಲ್ಪಟ್ಟಿತು, ತದನಂತರ ಈ ಪ್ರಶಸ್ತಿಯು 2005 ರಲ್ಲಿ ಶ್ರೀ ನೆಬ್ಬೂರು ನಾರಾಯಣ ಭಾಗವತ (ಯಕ್ಷಗಾನ) ಇವರಿಗೆ, 2006 ರಲ್ಲಿ ಖ್ಯಾತರಂಗ ನಟ ಶ್ರೀ ಏಣಗಿ ಬಾಳಪ್ಪ ಇವರಿಗೆ, 2007 ರಲ್ಲಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ (ಸಂಗೀತ), 2008 ರಲ್ಲಿ ಶ್ರೀ ಕೆ.ಎಸ್. ನಾರಾಯಣ ಆಚಾರ್ಯ, ಮೈಸೂರು (ಸಾಹಿತ್ಯ), 2009 ರಲ್ಲಿ ಶ್ರೀ ಹೊಸ್ತೋಟ ಮಂಜುನಾಥ ಭಾಗ್ವತ್, ಸಿರಸಿ (ಯಕ್ಷಗಾನ), 2010 ರಲ್ಲಿ ಶ್ರೀ ಸಂತ ಭದ್ರಗಿರಿ ಅಚ್ಯುತದಾಸ, ಬೆಂಗಳೂರು (ಹರಿಕಥಾ ವಿದ್ವಾಂಸರು), 2011 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ಯು.ಆರ್.ಅನಂತಮೂರ್ತಿ, ಬೆಂಗಳೂರು, 2012 ರಲ್ಲಿ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಕೆ. ಗೋವಿಂದ ಭಟ್ಟ, 2013 ರಲ್ಲಿ ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಪದ್ಮಶ್ರೀ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, 2014 ರಲ್ಲಿ ಪದ್ಮಶ್ರೀ ಪುರಸ್ಕೃತ ಶ್ರೀ ಸುರಭಿ ನಾಗೇಶ್ವರ ರಾವ್, ಹೈದ್ರಾಬಾದ್, 2015 ರಲ್ಲಿ ದೆಹಲಿಯ ಸ್ಪಿಕ್ ಮೆಕೆ ಸಂಸ್ಥೆ, 2016 ರಲ್ಲಿ ಮೇಲಟ್ಟೂರಿನ ಕಲೈಮಾಮಣಿ ಎಸ್. ನಟರಾಜ, ತಮಿಳುನಾಡು ಹಾಗೂ 2017 ರಲ್ಲಿ ಕರ್ಕಿಯ ಹಾಸ್ಯಗಾರ ಮೇಳಕ್ಕೆ, 2018 ರಲ್ಲಿ ನೀನಾಸಂನ ಹೆಗ್ಗೋಡು ಸಂಸ್ಥೆ, 2019 ರಲ್ಲಿ ಪದ್ಮಭೂಷಣ ಡಾ. ಪದ್ಮಸುಬ್ರಹ್ಮಣ್ಯ, ಚೆನ್ನೈ, 2021 ರಲ್ಲಿ ಪದ್ಮಶ್ರೀ ಡಾ. ಬಿ. ಜಯಶ್ರೀ ಇವರುಗಳಿಗೆ ನೀಡಲ್ಪಟ್ಟಿತು.
2023 ಫೆಬ್ರುವರಿ 03 ರಿಂದ ಫೆಬ್ರುವರಿ 07ರವರೆಗೆ ಗುಣವಂತೆ ಯಕ್ಷಾಂಗಣದಲ್ಲಿ, ನಡೆಯಲಿರುವ ಐದು ದಿನಗಳ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ ಸಂದರ್ಭದಲ್ಲಿ ದಿ: 03-02-2023 ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಯಕ್ಷಗಾನದ ಸರ್ವ ಸಮರ್ಥ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ” ಪ್ರಸಿದ್ಧ ಯಕ್ಷಗಾನದ ಕಲಾವಿದರಾದ ಶ್ರೀ ತಿಮ್ಮಪ್ಪ ಹೆಗಡೆ ಇವರಿಗೆ ಘೋಷಣೆ.
ಮಂಡಳಿಯ ಸರ್ವಸಮರ್ಥ ಯಕ್ಷಗಾನ ಕಲಾವಿದ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮಿಂಚಿ ಮರೆಯಾದ, ಶ್ರೀ ಕೆರೆಮನೆ ಶಿವರಾಮ ಹೆಗಡೆಯವರ ಕಿರಿಯ ಪುತ್ರ ಶ್ರೀ ಕೆರೆಮನೆ ಗಜಾನನ ಹೆಗಡೆ ಇವರ ಹೆಸರಿನಲ್ಲಿ ಕಳೆದ 11 ವರುಷದಿಂದ (2012) ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾಗಿ ನೀಡಲಾಗುತ್ತಿರುವ ಪ್ರಶಸ್ತಿಯನ್ನು 2023 ರಲ್ಲಿ ಶ್ರೀಯುತ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಯು ರೂ 15ಸಾವಿರ ನಗದು, ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವಗಳನ್ನು ಹೊಂದಿದೆ.
2012ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಮೊದಲು ಡಾ. ಕೊಳ್ಯೂರು ರಾಮಚಂದ್ರ ರಾವ್ (2012) ಇವರಿಗೆ ನೀಡಲಾಗಿತ್ತು, ತದನಂತರ ಶ್ರೀ ಕುಂಜಾಲು ರಾಮಕೃಷ್ಣ ನಾಯಕ (2013), ಶ್ರೀ ಪ್ರಭಾಕರ ಭಂಡಾರಿ, ಕರ್ಕಿ (2014), ಶ್ರೀ ಪಾತಾಳ ವೆಂಕಟ್ರಮಣ ಭಟ್, ಉಪ್ಪಿನಂಗಡಿ (2015) ಶ್ರೀ ಗೋವಿಂದ ಶೇರಿಗಾರ ಮಾರ್ಗೋಳಿ (2016) ಹಾಗೂ ಶ್ರೀ ಗೋಡೆ ನಾರಾಯಣ ಹೆಗಡೆ (2017), ಶ್ರೀ ತಿಮ್ಮಣ್ಣ ಯಾಜಿ ಮಣ್ಣಿಗೆ (2018) ಹಾಗೂ ಶ್ರೀ ಕೃಷ್ಣ ಯಾಜಿ ಇಡಗುಂಜಿ (2019), ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ(2021) ಇವರುಗಳಿಗೆ ನೀಡಲಾಗಿದೆ,
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಸಮಾರಂಭದಲ್ಲಿ ದಿ: 04-02-2023 ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.