ಭಟ್ಕಳ: ಎರಡು ದಿನಗಳ ಕಾಲ ನಡೆಯುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಾರಿಜಾತ್ರಾ ಮಹೋತ್ಸವವು ವಿದ್ಯುಕ್ತವಾಗಿ ಆರಂಭವಾಗಿದೆ. ರಾತ್ರಿ ದೇವಸ್ಥಾನದಲ್ಲಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ದೀಪಾರಾಧನೆ ಕಾರ್ಯಕ್ರಮ ನಡೆದಿದ್ದು, ಇಂದು ಬೆಳಿಗ್ಗೆ 8-20ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮಾರಿಕಾಂಬಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ವಿವಿಧ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ನಂತರ ಸಾರ್ವಜನಿಕರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಕರಾವಳಿಯ ಸುಪ್ರಸಿದ್ಧ ಮಾರಿಜಾತ್ರೆ ಎಂದೇ ಖ್ಯಾತಿ ಪಡೆದಿರುವ ಅಳೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾರಿಜಾತ್ರೆ ಮಹೋತ್ಸವ ಜನೇವರಿ 10 ರಿಂದ ಆರಂಭವಾಗಿ 2 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಲಿದೆ. ಸರ್ವರ ಕಷ್ಟಗಳನ್ನು ಪರಿಹರಿಸುವ ಶಕ್ತಿ ದೇವತೆಯಾದ ಈಕೆ ಸಕಲರ ಕಷ್ಟಗಳನ್ನು ನಿವಾರಣೆ ಮಾಡುವ ಭಕ್ತರ ಪಾಲಿನ ಆರಾಧ್ಯ ಶಕ್ತಿಯಾಗಿದ್ದಾಳೆ.
ಸುಮಾರು ಮುನ್ನೂರು ವರ್ಷಗಳ ಹಿಂದಿನ ಕಥೆಯ ಪ್ರಕಾರ ನಿರ್ಜನವಾದ ಕೇದಿಗೆ ಬನದ ಪೊದೆಗಳಿಂದ ಆವೃತವಾದ ಕಡಲಂಚಿನ ಪ್ರದೇಶದಲ್ಲಿ ನಿತ್ಯ ಹಸುವೊಂದು ಹಾಲೆರೆದು ಬರುತ್ತಿತ್ತು. ಅದನ್ನು ಗಮನಿಸಿದ ಹಿರಿಯರೊಬ್ಬರು ಹಸುವನ್ನು ಹಿಂಬಾಲಿಸಿದಾಗ ಅದು ಮೂರ್ತಿಯೊಂದಕ್ಕೆ ಹಾಲುಣಿಸುತ್ತಿರುವುದು ಗೋಚರಿಸಿತು. ಅದರಿಂದ ಪ್ರೇರಣೆಗೊಂಡ ಗ್ರಾಮಸ್ಥರು ಮೂರ್ತಿಯನ್ನು ತಂದು ಅದಕ್ಕೆ ಸಣ್ಣ ಗುಡಿ ಕಟ್ಟಿದರು. ಅಲ್ಲಿಂದ ನಿತ್ಯ ಪೂಜೆ ಪುರಸ್ಕಾರಗಳು ನಡೆಸಿಕೊಂಡು ಬರಲಾರಂಭಿಸಿದರು. ಅದೇ ದೇವಿ ಇಂದು ಪ್ರಸಿದ್ಧ ಅಳ್ವೆಕೋಡಿ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರಾಗಿ ಖ್ಯಾತಿ ಪಡೆದಿದ್ದಾಳೆ.