ಮಂಗಳೂರು: ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಹಾಗೂ ಮೇರು ಸಾಹಿತಿ ಸಾರಾ ಅಬೂಬಕ್ಕರ್‌ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ತಮ್ಮ ಸಾಹಿತ್ಯಗಳಲ್ಲಿ ಮುಸ್ಲಿಂ ಸಮುದಾಯದ ಕಟ್ಟರ್‌ ಸಂಪ್ರದಾಯಗಳನ್ನು ಬಲವಾಗಿ ಟೀಕಿಸುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಹಾಥಿಲ್‌ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು, ಮಂಗಳವಾರ ರಾತ್ರಿ 8 ಗಂಟೆಗೆ ಅಂತಿಮ ವಿಧಿವಿಧಾನ ನಡೆಯಲಿದೆ.
ಸಾರಾ ಅಬೂಬಕ್ಕರ್‌ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ಅವರ ತಂದೆ ಪಿ.ಅಹಮದ್ ನ್ಯಾಯವಾದಿ ಹಾಗೂ ತಾಯಿ ಚೈನಾಬಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮೂರಿನಲ್ಲಿಯೇ ಮಾಡಿದ ಅವರು, ಕಾಸರಗೋಡಿನಲ್ಲಿ ಹೈಸ್ಕೂಲ್‌ ವರೆಗೆ ಕಲಿತರು. ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದ ಗೀಳು ಅವರಿಗೆ ಅಂಟಿಕೊಂಡಿತು.

ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ವಿವಾಹವಾದ ಬಳಿಕ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಬೇಕಾಯಿತು. ಆದರೆ ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಸಾರಾ ಅಬೂಬಕ್ಕರ್‌ ಅವರು ಶಿವರಾಮ ಕಾರಂತ, ವಿ.ಎಂ.ಇನಾಂದಾರ್, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರನ್ನು ಆಕರ್ಷಿಸಿದವು.

RELATED ARTICLES  ಭಾರತ್ ಬಂದ್ ಇದ್ದರೂ..ಮತ್ತೆ ಪೆಟ್ರೋಲ್-ಡೀಸೆಲ್ ದರದಲ್ಲಿ ದಾಖಲೆ ಏರಿಕೆ !

ತಮ್ಮ ಧರ್ಮದ ತಲಾಕ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಅವರನ್ನು ಕಾಡುತ್ತಿದ್ದವು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ 40 ದಾಟಿದ ನಂತರ ಸಾರಾ ಅಬೂಬಕ್ಕರ್ ಸಾಹಿತ್ಯ ಕೃಷಿಯಲ್ಲಿ ಗಂಭೀರವಾಗಿ ತೊಡಗಿದರು. ಮಹಿಳಾ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಚಿಂತನೆಗಳ ಮೂಲಕ ತಮ್ಮನ್ನು ವಿಶಿಷ್ಟ ಸಾಹಿತಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡರು. ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ನಿರಂತರವಾಗಿ ಪ್ರತಿಪಾದಿಸಿದ್ದ ಸಾರಾ ಅಬೂಬಕ್ಕರ್ ಮಹಿಳೆಯರು ಮಕ್ಕಳನ್ನು ಹೆರಲು ಇರುವ ಯಂತ್ರಗಳಲ್ಲ. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ ಎಂದು ಹೇಳುತ್ತ ಆದರೆ ಸೌದಿ ಅರೇಬಿಯಾ ಮೂಲದ ‘ವಹಾಬಿಸಂ’ ವಿರುದ್ಧ ಕಟುವಾಗಿ ಟೀಕಿಸಿದ್ದರು. ಅವರು 10 ಕಾದಂಬಲಿ, 6 ಕಥಾ ಸಂಕಲನ, 5 ಬಾನುಲಿ ನಾಟಕ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಮಾಡಿದ್ದಾರೆ.

ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಈ ಕಥೆಯಲ್ಲಿ ಕಂಡುಬಂದ ಬದುಕಿನ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತ ಮಹಿಳೆಯರ ಧ್ವನಿಗಳ ಬಗ್ಗೆ ಅವರು ಬರೆದದ್ದು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿತು ಹಾಗೂ ಕಾದಂಬರಿ ವ್ಯಾಪಕ ಮೆಚ್ಚುಗೆ ಪಡೆಯಿತು. ನಂತರದಲ್ಲಿ ಅವರು ಕನ್ನಡದಲ್ಲಿ ಹಲವಾರು ಕಾದಂಬರಿಗಳನ್ನು ಬರೆದರು. ಅವರು ಪ್ರಕಾಶಕಿಯೂ ಆಗಿದ್ದರು. ಅವರು ತಮ್ಮ ಚಂದ್ರಗಿರಿ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದರು.

RELATED ARTICLES  ಬಿಎಸ್ಎನ್ಎಲ್ ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

ಚಂದ್ರಗಿರಿಯ ತೀರದಲ್ಲಿ(1984), ಸಹನಾ(1985), ವಜ್ರಗಳು, ಕದನ ವಿರಾಮ(1988), ಸುಳಿಯಲ್ಲಿ ಸಿಕ್ಕವರು (1994), ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಭಾಗ-೨), ತಳ ಒಡೆದ ದೋಣಿ(1997), ಪಂಜರ, ಇಳಿಜಾರು, ಖೆಡ್ಡ, ಗಗನ ಸಖಿ ಮತ್ತು ಕಾಣಿಕೆ ಹೀಗೆ ಸಾರಾ ಅಬೂಬಕ್ಕರ್‍ ಅನೇಕ ಕೃತಿಗಳನ್ನು ಬರೆದಿದ್ದಾರೆ. ಅಲ್ಲದೆ ಅವರು ಕಥಾ ಸಂಕಲಗಳನ್ನೂ ಬರೆದಿದ್ದಾರೆ. ಚಪ್ಪಲಿಗಳು(1989), ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು(1997), ಖೆಡ್ಡ, ಸಮಯ್ಯಾ (ಜನಪದ ಆಧರಿಸಿದ ಕಥೆಗಳು-2004) ಮತ್ತು ಗಗನ ಸಖಿ(2007) ಅವರು ಬರೆದ ಕಥಾ ಸಂಕಲನಗಳು.

ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವುಗಳು ಬಾನುಲಿ ನಾಟಕಗಳಾಗಿವೆ. ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ(ಕಾದಂಬರಿಗಳು) ಅವರ ಲೇಖನ ಮತ್ತು ಅನುವಾದಗಳಾಗಿವೆ. ಇದರ ಜೊತೆಗೆ ಪ್ರವಾಸ ಕಥನವನ್ನೂ ಅವರು ಬರೆದಿದ್ದಾರೆ.